ಮಡಿಕೇರಿ: ಮೀಟರ್ ಬಡ್ಡಿ ದಂಧೆ ನಿಯಂತ್ರಿಸಲು ಒತ್ತಾಯ
ಮಡಿಕೇರಿ, ಡಿ.17: ಆರ್ಥಿಕ ಸ್ವಾವಲಂಬನೆಯ ಕನಸು ಹೊತ್ತ ಮಹಿಳೆೆಯರ ಬದುಕು ಹಾಳುಗೆಡಹುತ್ತಿರುವ ಮೀಟರ್ ಬಡ್ಡಿ ದಂಧೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಶೀದ್, ಜಿಲ್ಲಾಡಳಿತ ಇದಕ್ಕೆ ಸ್ಪಂದಿಸದಿದ್ದಲ್ಲಿ ಸಂತ್ರಸ್ತ ಮಹಿಳೆಯರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲೆಯ ಕುಶಾಲನಗರ, ಮಡಿಕೇರಿ ಸೇರಿದಂತೆ ವಿವಿಧೆಡೆಗಳಲ್ಲಿ ಅಮಾಯಕ ಮಹಿಳೆಯರಿಗೆ ದೊಡ್ಡ ಪ್ರಮಾಣದ ಬಡ್ಡಿ ದರಕ್ಕೆ ಸಾಲವನ್ನು ನೀಡುವುದಲ್ಲದೆ, ಖಾಲಿ ಬಾಂಡ್ ಪೇಪರ್ ಮತ್ತು ಚೆಕ್‌ಗಳಿಗೆ ಸಹಿ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಪಡೆದ ಸಾಲದ ಕಂತನ್ನು ಪ್ರತಿವಾರ ಕಟ್ಟಿಸಿಕೊಳ್ಳುವ ಬಡ್ಡಿ ದಂಧೆಕೋರರು ಅದರ ವಸೂಲಾತಿಗೆ ಇನ್ನಿಲ್ಲದ ಉಪಟಳವನ್ನು ನೀಡುತ್ತಿದ್ದಾರೆ. ಹಣ ವಸೂಲಾತಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಗರ್ಭಿಣಿಯೊಬ್ಬರನ್ನು ತಮ್ಮ ಕಚೇರಿಯಲ್ಲೇ ಇರಿಸಿಕೊಂಡಂತಹ ಅಮಾನವೀಯ ಘಟನೆಗಳು ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿ ಬಡ್ಡಿ ದಂಧೆ ಕೋರರು, ಮೀಟರ್ ದಂಧೆಕೋರರ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಶೀದ್ ಎಚ್ಚರಿಕೆ ನೀಡಿದರು.
ಸಣ್ಣ ಸಾಲಕ್ಕೆ ಸ್ವಂತ ಮನೆಯನ್ನೆ ಬಡ್ಡಿ ದಂಧೆಕೋರರಿಗೆ ಬರೆದುಕೊಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕುಶಾಲನಗರದ ಅಸ್ಮಾ ಮಾತನಾಡಿ, ಬ್ಯಾಂಕ್ ಖಾತೆಗಳನ್ನು ಹೊಂದಿರದ ಅವಿದ್ಯಾವಂತ ಮಹಿಳೆಯರಿಗೆ ಅಧಿಕ ಬಡ್ಡಿ ದರದಲ್ಲಿ ಸಾಲವನ್ನು ನೀಡಿ ಅದರ ವಸೂಲಾತಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷೆ ಮಾಚಿಮಾಡ ವಾಣಿ, ಕುಶಾಲನಗರದ ಗೌರಿ, ಸೀಮಾ ಹಾಗೂ ರೆಹರಾ ಉಪಸ್ಥಿತರಿದ್ದರು.