ಬೀದಿಬದಿ ವ್ಯಾಪಾರಿಗಳಿಗೆ ಅನಗತ್ಯ ಕಿರುಕುಳ
ಸಾಗರ, ಡಿ.17: ಸಂತೆ ಹಾಗೂ ಬೀದಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ನೀಡುತ್ತಿರುವ ಅನಗತ್ಯ ಕಿರುಕುಳವನ್ನು ತಪ್ಪಿಸುವಂತೆ ಒತ್ತಾಯಿಸಿ ಗುರುವಾರ ಸಾಗರ ಪ್ರಾಂತ ಸಂತೆ ಬೀದಿ ವ್ಯಾಪಾರಿಗಳ ಒಕ್ಕೂಟದ ವತಿಯಿಂದ ನಗರಸಭೆ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ನೆಹರೂ ನಗರ ವ್ಯಾಪ್ತಿಯಲ್ಲಿರುವ ಕೃಷ್ಣರಾಜೇಂದ್ರ ಸಂತೆಮೈದಾನ ದಿನೇ ದಿನೇ ಅತಿಕ್ರಮಣವಾಗುತ್ತಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದ ನೆಹರೂ ನಗರದ ರಸ್ತೆಯಂಚಿನಲ್ಲಿ ಸಂತೆದಿನ ವ್ಯಾಪಾರ ಮಾಡುತ್ತಿರುವ ಸುಮಾರು 150ಕ್ಕೂ ಹೆಚ್ಚು ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ನಗರಸಭೆ ಆಡಳಿತ ವಿನಾಕಾರಣ ಕಿರುಕುಳ ನೀಡುತ್ತಿದೆ.
ಇದನ್ನು ಒಕ್ಕೂಟ ಖಂಡಿಸುತ್ತಿದ್ದು, ಸಂತೆ ಸಂಸ್ಕೃತಿಗೆ ಧಕ್ಕೆ ತರುವ ಕೆಲಸವನ್ನು ಆಡಳಿತ ನಡೆಸುವವರು ಮಾಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಗರಸಭೆ ವತಿಯಿಂದ ಸಂತೆ ಮೈದಾನದೊಳಗೆ ಬೃಹತ್ ಟ್ಯಾಂಕ್ ಸಹ ನಿರ್ಮಾಣ ವಾಗುತ್ತಿದೆ. ಸಂತೆ ಮೈದಾನದಲ್ಲಿ ಕೆಲವೇ ವ್ಯಾಪಾರಿಗಳು ಕುಳಿತು ವ್ಯಾಪಾರ ಮಾಡಲು ಸಾಧ್ಯವಾಗಿರುವುದರಿಂದ ವ್ಯಾಪಾರಿಗಳು ಸಂತೆಮೈದಾನಕ್ಕೆ ಹೊಂದಿಕೊಂಡಂತೆ ಇರುವ ಅಕ್ಕಪಕ್ಕದ ರಸ್ತೆಗಳಲ್ಲಿ ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ನಗರಸಭೆ ಆಡಳಿತ ಕೆಲವೇ ಸ್ವಹಿತಾಸಕ್ತಿಯ ಖಾಯಂ ವ್ಯಾಪಾರಿಗಳಿಗೆ ಬೆಂಬಲ ನೀಡಿ ಬೃಹತ್ ಸಂಖ್ಯೆಯ ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಅನ್ಯಾಯ ಮಾಡಬಾರದು. ನಗರಸಭೆ ಸಿಬ್ಬಂದಿ ವ್ಯಾಪಾರಿಗಳನ್ನು ಹೆದರಿಸಿ, ಬ್ಯಾರಿಕೇಡ್‌ಗಳನ್ನು ಹಾಕಿ ಟ್ರ್ಯಾಕ್ಟರ್ ಮೂಲಕ ತರಕಾರಿ ಹೇರಿಕೊಂಡು ಹೋಗುತ್ತಿರುವ ಕ್ರಮ ಖಂಡನೀಯ ಎಂದರು.
ಸಂತೆ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ಹೊಸ ಮಾರುಕಟ್ಟೆಗೆ ಸ್ಥಳಾಂತರವಾಗುವ ತನಕ ಈಗಿನ ಮಾದರಿಯಲ್ಲಿಯೇ ರಸ್ತೆ ಅಂಚಿನಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಬೇಕು.
ಹೊಸ ಸಂತೆ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ಕಡಿಮೆಯಾದರೆ ಕೆರೆ ಏರಿಮೇಲೆ ಇರುವ ಜಾಗದಲ್ಲಿ ರೈತರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕ ಹಿತಕರ ಜೈನ್, ಸಂತೋಷ್, ದುರ್ಗಪ್ಪ ಬರದವಳ್ಳಿ, ತಿಮ್ಮಪ್ಪ ಯಲಕುಂದ್ಲಿ, ಸತ್ಯನಾರಾಯಣ, ಅಶೋಕ್ ಕೋಗಾರ್, ಚಿದಾನಂದ ಬಳಸಗೋಡು, ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.