ಮಡಿಕೇರಿ : ದಿಡ್ಡಳ್ಳಿ ಹಾಡಿಯಲ್ಲಿ ಬೃಹತ್ ಸಂಕಲ್ಪ ದಿನ ಹೋರಾಟ ಪ್ರಾರಂಭ
ಸಿದ್ದಾಪುರ, ಡಿ.18: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ದಿಡ್ಡಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಗಿರಿಜನರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದ ನಂತರ ಆಶ್ರಮ ಶಾಲೆ ಸಮೀಪ ನಿರಾಶ್ರಿತರಾಗಿರುವ ಆದಿವಾಸಿಗಳ ಆಹೋರಾತ್ರಿ ಹೋರಾಟ 13ನೇ ದಿನಕ್ಕೆ ಕಾಲಿಟ್ಟಿದೆ.
ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಬೃಹತ್ ಸಂಕಲ್ಪ ದಿನ ಹೋರಾಟ ಪ್ರಾರಂಭವಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನೂರಾರು ಹೋರಾಟಗಾರರು ಸಂಕಲ್ಪ ದಿನ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹಾಡಿಯ ರಸ್ತೆ ಉದ್ದಕ್ಕೂ ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ, ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಿದ ಅರಣ್ಯ ಇಲಾಖೆ ಹಾಗೂ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆಗಳ ಭಿತ್ತಿ ಪತ್ರಗಳು ರಾರಾಜಿಸುತ್ತಿದೆ. ನೂರಾರು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿರುವುದು ಕಂಡು ಬಂದಿದೆ.
ಹೋರಾಟದಲ್ಲಿ ಹಿರಿಯ ಹೋರಾಟಗಾರ ಹಾಗೂ ವಿಧಾನ ಪರಿಷತ್ ಸದಸ್ಯ ಎ.ಕೆ ಸುಬ್ಬಯ್ಯ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಮುಖಂಡರಾದ ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಶ್ರೀನಿವಾಸ್, ಮಂಜು, ನಿರ್ವಾಹಣಪ್ಪ, ಚಲೋ ಉಡುಪಿ ಹೋರಾಟದ ಪ್ರಮುಖರಾದ ಭಾಸ್ಕರ್ ರಾವ್, ಗೌರಿ , ಸಾಹಿತಿ ಡಾ.ವಿಜಯ, ವಿಶ್ವ ಮಾನವ ಹಕ್ಕುಗಳ ಸೇವಾ ಆಯೋಗದ ರಾಜ್ಯ ಅಧ್ಯಕ್ಷ ಸಿದ್ದಲಿಂಗಯ್ಯ ಗೌಡ, ಪರಿಸರ ಹೋರಾಟಗಾರ ಮಹೇಂದ್ರ, ಶಿವಮೊಗ್ಗ ವಿಶ್ವ ವಿದ್ಯಾನಿಲಯದ ಕಿರಣ್ ಗಾಜನೂರು, ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ. ಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಆರ್, ಬಾಲಾಜಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಹೇಮಂತ್, ಆದಿವಾಸಿ ಮುಖಂಡರಾದ ಅಪ್ಪಾಜಿ, ಮುತ್ತಮ್ಮ ಉಪಸ್ಥಿತರಿದ್ದರು.