ದಿಡ್ಡಳ್ಳಿಯಲ್ಲಿ ಸಂಕಲ್ಪ ಸಭೆ : ಅಧಿಕಾರಿಗಳ ವಿರುದ್ಧ ಅಸಮಾಧಾನ ಸ್ಫೋಟ
ಮಡಿಕೇರಿ ಡಿ.18 : ದಿಡ್ಡಳ್ಳಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ನಡೆದ ಸಂಕಲ್ಪ ಸಭೆಯಲ್ಲಿ ಜನಪರವಾದ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ನಿರಾಶ್ರಿತರ ಪರವಾದ ನಿರ್ಣಯಗಳನ್ನು ಮಂಡಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.
ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಬದುಕುವ ಹಕ್ಕು ಎಲ್ಲರಿಗೂ ಇದ್ದು, ದುರ್ಬಲರ ಪರವಾದ ಹೋರಾಟಗಳನ್ನು ತೀವ್ರಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಜನಸಾಮಾನ್ಯರು ಸ್ವಾಭಿಮಾನದಿಂದ ಜೀವನ ನಡೆಸಬೇಕಾದರೆ ಸರಕಾರ ತನ್ನ ಜವಬ್ದಾರಿಯನ್ನು ಅರಿತು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಗಿರಿಜನರಂತಹ ದುರ್ಬಲ ವರ್ಗಕ್ಕೆ ಸರಕಾರವೇ ನಿವೇಶನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕಾಗಿತ್ತು. ಆದರೆ ಇಂದು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯುವ ದುರ್ಗತಿ ಬಂದೊದಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಆದಿವಾಸಿಗಳು ಇಂದು ಬೀದಿ ಪಾಲಾಗುವಂತ್ತಾಗಿದೆ. ದಿಡ್ಡಳ್ಳಿಯಲ್ಲಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ವ್ಯಕ್ತಿಗಳು ವಾಸವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯವೆಂದು ಸುಬ್ಬಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸರಕಾರ ನಿರಾಶ್ರಿತರಿಗೆ ಇದೇ ಪ್ರದೇಶದಲ್ಲಿ ಭೂಮಿ ನೀಡಬೇಕೆಂದು ಅವರು ಒತ್ತಾಯಿಸಿದರು.
ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ಸರಕಾರ ಅಸಹಾಯಕ ಮಂದಿಯನ್ನು ಕಡೆಗಣಿಸಿದ್ದು, ಅಧಿಕಾರದ ದರ್ಪವನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದರು. ಜಿಲ್ಲೆಗೆ ಐವರು ಸಚಿವರು ಆಗಮಿಸಿದರೂ ಸೌಜನ್ಯಕ್ಕೂ ದಿಡ್ಡಳ್ಳಿ ಆದಿವಾಸಿ ನಿರಾಶ್ರಿತರನ್ನು ಭೇಟಿ ಮಾಡಿಲ್ಲ. ಅಧಿಕಾರಿಗಳು ಕೂಡ ನಿರಾಶ್ರಿತರ ಬಗ್ಗೆ ಕಾಳಜಿ ತೋರಿಲ್ಲ. ಮಳೆ, ಚಳಿ, ಬಿಸಿಲೆನ್ನದೆ ಕಳೆದ ಒಂದು ವಾರದಿಂದ ಆದಿವಾಸಿಗಳು ಅತಂತ್ರರಾಗಿ ಜೀವನ ಸಾಗಿಸುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಗಿರಿಜನರು ತೋಟಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದು, ತಮ್ಮ ಬದುಕು ಕಂಡುಕೊಳ್ಳಲು ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿ ವಾಸವಾಗಿದ್ದರು. ಆದರೆ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳು ಗಿರಿಜನರಿಂದ ಲಂಚ ಪಡೆದು ನಿವೇಶನದ ಆಮಿಷವೊಡ್ಡಿ ನಂತರ ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.
ಅಮಾಯಕ ಗಿರಿಜನರಿಗೆ ಭೂಮಿ ಹಾಗೂ ವಸತಿ ಸೌಲಭ್ಯ ಸಿಗುವವರೆಗೂ ಹೋರಾಟ ಮುಂದುವರೆಯಲಿದ್ದು, ರಾಜ್ಯ ವ್ಯಾಪಿ ಹಲವು ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ ಎಂದರು.
ಸಿಪಿಐಎಂಎಲ್‌ನ ಪ್ರಮುಖರಾದ ನಿರ್ವಾಣಪ್ಪ ಮಾತನಾಡಿ, ಕೊಡಗಿನ ಕಾಫಿ ತೋಟಗಳಲ್ಲಿ ಅಲ್ಪಸಂಬಳಕ್ಕೆ ಜೀತದಾಳುಗಳಾಗಿ ದುಡಿಯುತ್ತಿದ್ದ ಆದಿವಾಸಿಗಳು ತಮಗೆ ಸ್ವಂತ ಸೂರು ಬೇಕೆಂದು ದಿಡ್ಡಳ್ಳಿಗೆ ಬಂದು ನೆಲೆಸಿದ್ದಾರೆ. ಆದರೆ ಅರಣ್ಯ ಇಲಾಖಾ ಅಧಿಕಾರಿಗಳು ಕಡು ಬಡವರಿಂದ ಲಂಚ ಪಡೆದು ಗುಡಿಸಲು ನಿರ್ಮಿಸಲು ಅವಕಾಶ ನೀಡಿ ಬಳಿಕ ಏಕಾಏಕಿ ಒಕ್ಕಲೆಬ್ಬಿಸಿದ್ದಾರೆ ಎಂದು ಆರೋಪಿಸಿದರು.
ಸರಕಾರ ಬಂಡವಾಳಶಾಹಿಗಳಿಗೆ, ಬೃಹತ್ ಕೈಗಾರಿಕೋದ್ಯಮಿಗಳಿಗೆ, ಮಠಗಳಿಗೆ ಉದಾರವಾಗಿ ಭೂಮಿ ನೀಡುತ್ತದೆ. ಆದರೆ ಏನೂ ಅರಿಯದ ಅಸಹಾಯಕ ಆದಿವಾಸಿ ಮಂದಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ನಿವೇಶನ ನೀಡಲು ಯಾಕೆ ಸಾಧ್ಯವಿಲ್ಲವೆ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಿರ್ವಾಣಪ್ಪ ರಾಜಕಾರಣಿಗಳು ಹಾಗೂ ಭೂಮಾಲೀಕರ ಒತ್ತಡಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರೆ . ಕ್ಷೇತ್ರದ ಶಾಸಕರು ಹಾಗೂ ಕೆಲವು ರಾಜಕಾರಣಿಗಳು ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಲು ಬಂದ ಹಾಗೆ ದಿಡ್ಡಳ್ಳಿಗೆ ಬಂದು ಮೊಸಳೆ ಕಣ್ಣೀರಿಟ್ಟು ತೆರಳುತ್ತಿದ್ದಾರೆ ಎಂದು ಟೀಕಿಸಿದರು.
ಸ್ಥಳಕ್ಕೆ ಬಂದ ಅಧಿಕಾರಿಗಳ ವಿರುದ್ಧ ಅಸಮಾಧಾನ ::
ಬೆಳಗ್ಗಿನಿಂದ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ 50 ಕ್ಕೂ ಹೆಚ್ಚು ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು.
ಈ ಹಿನ್ನೆಲೆ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ವಿರಾಜಪೇಟೆ ತಹಶಿೀಲ್ದಾರರಾದ ಮಹದೇವಸ್ವಾಮಿ ಹಾಗೂ ಸಮಾಜ ಕಲ್ಯಾಣಾಧಿಕಾರಿ ಮಾಯಾದೇವಿ ಗಲಗಲಿ ಆಗಮಿಸಿದರು. ಆದಿವಾಸಿಗಳು ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು.
ಹೋರಾಟಗಾರ್ತಿ ಜೇನು ಕುರುಬರ ಮುತ್ತಮ್ಮ ಮಾತನಾಡಿ ಗಿರಿಜನರು ಮಳೆಯಲ್ಲಿ ಬೀದಿಯಲ್ಲಿ ವಾಸವಾಗಿದ್ದ ಸಂದರ್ಭ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಸೌಜನ್ಯಕ್ಕೂ ಭೇಟಿ ನೀಡಿಲ್ಲ. ನಾವು ಕೂಡ ನಿಮ್ಮ ಹಾಗೆ ಮನುಷ್ಯರಲ್ಲವೇ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ , ಹಲ್ಲೆ ನಡೆಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಯಾದೇವಿ ಗಲಗಲಿ, ತಾನು ಒಂದು ತಿಂಗಳ ಹಿಂದೆಯಷ್ಟೇ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದು, ದಿಡ್ಡಳ್ಳಿ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು. ಇಲ್ಲಿನ ನಿರಾಶ್ರಿತರಿಗೆ ಕಂದಾಯ ಇಲಾಖೆ ಪೈಸಾರಿ ಜಾಗದಲ್ಲಿ ನಿವೇಶನ ನೀಡಿದರೆ ತಮ್ಮ ಇಲಾಖೆಯಿಂದ ಎಲ್ಲಾ ಸೌಕರ್ಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ತಾನು ಬಂದ ಬಳಿಕ 200 ಹಕ್ಕು ಪತ್ರವನ್ನು ನೀಡಿರುವುದಾಗಿ ಅವರು ತಿಳಿಸಿದರು.
ನಂತರ ಮಾಡನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ನಂಜುಂಡೇಗೌಡ, ಜಿಲ್ಲಾಧಿಕಾರಿಗಳು ಈಗಾಗಲೇ ಜಿಲ್ಲೆಯ ವಿವಿಧೆಡೆ ಪೈಸಾರಿ ಜಾಗವನ್ನು ಗುರುತಿಸಿದ್ದು, ನಿರಾಶ್ರಿತರ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಒಂದು ತಿಂಗಳಲ್ಲಿ ಭೂಮಿಯನ್ನು ವಶಪಡಿಸಿ, ನಿರಾಶ್ರಿತರಿಗೆ ಹಂಚಲಾಗುವುದು ಎಂದರು.
ಆದರೆ , ಪ್ರತಿಭಟನಾಕಾರರು ಪೊಳ್ಳು ಭರವಸೆಗೆ ಬಗ್ಗುವುದಿಲ್ಲ ಎಂದು ಘೋಷಣೆ ಕೂಗಿ, ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
:: ಸಂಕಲ್ಪ ಸಭೆಯ ನಿರ್ಣಯಗಳು ::
ನಿರಾಶ್ರಿತರಿಗೆ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಿವೇಶನ ನೀಡಬೇಕು, ತಕ್ಷಣ ಊಟ, ವಸತಿ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಬೇಕು, ಗುಡಿಸಲು ತೆರವುಗೊಳಿಸುವ ಸಂದರ್ಭ 8 ಮಂದಿಯ ವಿರುದ್ಧ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು, ರಾಜ್ಯದಲ್ಲಿರುವ ಎಲ್ಲಾ ಆದಿವಾಸಿಗಳಿಗೆ ಭೂಮಿಯ ಹಕ್ಕನ್ನು ನೀಡಬೇಕು, ಆದಿವಾಸಿಗಳು ಯಾವುದೇ ಜಾಗದಲ್ಲಿ ವಾಸವಾಗಿದ್ದರೂ ಅವರಿಗೆ ಅದೇ ಭೂಮಿಯನ್ನು ನೀಡಬೇಕು, ಪೈಸಾರಿ ಹಾಗೂ ಅರಣ್ಯ ಭೂಮಿಯಲ್ಲಿ ಆದಿವಾಸಿಗಳು ವಾಸವಿದ್ದರೇ ಅದನ್ನು ಸಕ್ರಮಗೊಳಿಸಬೇಕು, ಇಲ್ಲವಾದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಒದಗಿಸಬೇಕು ಎನ್ನುವ ಒತ್ತಾಯಗಳನ್ನು ಮಂಡಿಸಲಾಯಿತು.
ಸಂಕಲ್ಪ ಸಭೆಯ ಅಧ್ಯಕ್ಷತೆಯನ್ನು ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಕೇಂದ್ರ ಸಮಿತಿ ಸದಸ್ಯ ಸಿರಿಮನೆ ನಾಗರಾಜ್ ವಹಿಸಿದ್ದರು.
ಸಭೆಯಲ್ಲಿ ಕೇಂದ್ರ ಸಮಿತಿ ಸದಸ್ಯರಾದ ಗುರುಶಾಂತ್, ಮಾನವಹಕ್ಕು ಕಾರ್ಯಕರ್ತ ವಸಂತ, ಸಮಿತಿಯ ಖಜಾಂಚಿ ಕಾವೇರಿ, ಸಿ.ಪಿ.ಐ (ಎಂ) ಜಿಲ್ಲಾ ಕಾರ್ಯದರ್ಶಿ ಡಾ.ದುರ್ಗಪ್ರಸಾದ್, ಕಾಂಗ್ರೆಸ್ ಮುಖಂಡರಾದ ಪಿ.ಸಿ.ಹಸೈನಾರ್, ಆರ್.ಕೆ.ಸಲಾಂ, ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಮೀನ್ ಮೊಸಿನ್, ಡಾ.ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಮೂರ್ತಿ, ರಂಗಭೂಮಿ ಕಲಾವಿದೆ ಹಾಗೂ ಸಾಹಿತಿ ಡಾ.ವಿಜಯಮ್ಮ, ಪ್ರಗತಿಪರ ಚಳುವಳಿಯ ರಾಜಣ್ಣ, ಮೂಲಭೂತ ಹಕ್ಕುಗಳ ಸಮಿತಿ ಅಧ್ಯಕ್ಷ ಅಣ್ಣಯ್ಯ, ಬುಡಕಟ್ಟು ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷೆ ಜಯಮಾಲ, ಬಹುಜನ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಮೇಶ, ರೇವತಿ ಸೇರಿದಂತೆ ರಾಜ್ಯದ 50 ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.