×
Ad

ಬಿದ್ದದ್ದು ಒಂದೇ ನೆಪ, ಈಕೆಯ ದೇಹವಿಡೀ ಕೀವು

Update: 2016-12-18 23:21 IST

ಮಡಿಕೇರಿ, ಡಿ.18: ಜ್ಯೋತಿ ಎಲ್ಲರಂತೆ ಶಾಲೆಗೆ ಸೇರಿ ಆಟ, ಪಾಠದಲ್ಲಿ ಕಾಲ ಕಳೆಯಬೇಕಾದವಳು. ಆದರೆ ಇಂದು ತನ್ನ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿಗೆ ಈಕೆ ಬಂದು ತಲುಪಿದ್ದಾಳೆ. ಆಟವಾಡುವಾಗ ಬಿದ್ದದ್ದು ಒಂದೇ ನೆಪ, ಆರು ತಿಂಗಳ ಹಿಂದೆ ಮಂಡಿಗೆ ಆದ ಗಾಯ ಇನ್ನೂ ಆರಲೇ ಇಲ್ಲ.

ಇದೀಗ ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ಟೆಂಟ್‌ನಲ್ಲಿ ವಾಸಿಸುತ್ತಿರುವ ಏಳು ವರ್ಷ ಪ್ರಾಯದ ಜ್ಯೋತಿ, ಮೂಲತ: ಶಿವಮೊಗ್ಗದ ಬಾಲಕಿ.
ಆಂಜನಪ್ಪ ಹಾಗೂ ಲಲಿತಾ ದಂಪತಿಗಳ ಪುತ್ರಿಯಾಗಿರುವ ಈಕೆ ಅಪ್ಪ, ಅಮ್ಮ ಕೂಲಿ ಕೆಲಸಕ್ಕೆಂದು ಊರೂರು ಅಲೆದಾಡುವಾಗ ಜೊತೆಯಲ್ಲೇ ತೆರಳುತ್ತಾಳೆ. ಆರು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಆಟವಾಡುತ್ತಿದ್ದಾಗ ಆಯ ತಪ್ಪಿಬಿದ್ದು, ಮಂಡಿಗೆ ಗಾಯ ಮಾಡಿಕೊಂಡ ಜ್ಯೋತಿ ಇಂದು ಆರದ ಗಾಯದಿಂದ ನರಳುತ್ತಿದ್ದಾಳೆ. ಬಲಗಾಲಿನಲ್ಲಿರುವ ಗಾಯದಲ್ಲಿ ಸದಾ ಮಾಂಸ ಮಿಶ್ರಿತ ಕೀವು ಸೋರಿಕೆಯಾಗುತ್ತಿದ್ದು, ಕಾಲು ಊನ ಪರಿಸ್ಥಿತಿಯಿಂದ ವಕ್ರವಾಗುತ್ತಿದೆ.


ಜ್ಯೋತಿಯ ಪೋಷಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರೂ ಮಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಅನೇಕ ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಶಿವಮೊಗ್ಗ, ಮೈಸೂರು, ಕೆ.ಆರ್.ನಗರ, ಮಂಗಳೂರು ಹಾಗೂ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲೂ ಕಾಲಿನ ಗಾಯಕ್ಕೆ ಚಿಕಿತ್ಸೆಯನ್ನು ನೀಡಲಾಗಿದೆ. ಆದರೆ ಜ್ಯೋತಿಯ ಕಾಲಿನಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.


ಈಕೆಯ ಪೋಷಕರ ಹೇಳಿಕೆ ಪ್ರಕಾರ ಮೂಳೆ ಸಹಿತ ದೇಹದ ಇತರ ಭಾಗಗಳಲ್ಲೂ ಕೀವು ವ್ಯಾಪಿಸಿದ್ದು, ಶಸ್ತ್ರ ಚಿಕಿತ್ಸೆಯ ಅಗತ್ಯವಿದೆಯಾದರೂ ಶಸ್ತ್ರ ಚಿಕಿತ್ಸೆಯಿಂದ ಮಗಳ ಜೀವಕ್ಕೆ ಅಪಾಯವಿದೆ ಎನ್ನುವ ಆತಂಕವೂ ಎದುರಾಗಿದೆ. ಮಣ್ಣಿನ ವಾತಾವರಣದಲ್ಲೇ ವಾಸಿಸುತ್ತಿರುವುದರಿಂದ ಅಶುಚಿತ್ವದಿಂದಾಗಿ ಕಾಲಿನ ಗಾಯ ಉಲ್ಬಣಗೊಳ್ಳುತ್ತಿದೆ.
 ಶಿಕ್ಷಣದಿಂದ ವಂಚಿತರಾಗಿರುವ ಪೋಷಕರು ಅಸಹಾಯಕಸ್ಥಿತಿಯಲ್ಲಿದ್ದು,ಹೆಚ್ಚಿನ ಚಿಕಿತ್ಸೆ ಮೂಲಕ ಮಗಳನ್ನು ಉಳಿಸಿಕೊಳ್ಳುವ ಕಾತರದಲ್ಲಿದ್ದಾರೆ.
 

ಸಂಘ, ಸಂಸ್ಥೆಗಳು, ಸಮಾಜ ಸೇವಕರು, ದಾನಿಗಳು ಈ ಬಗ್ಗೆ ಗಮನ ಹರಿಸಿ ಜ್ಯೋತಿಯ ಬಾಳಿಗೆ ಬೆಳಕು ನೀಡುವ ಮಹತ್ಕಾರ್ಯವನ್ನು ಮಾಡಬೇಕಾಗಿದೆ. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೂಡ ಈ ಬಾಲಕಿ ಬಗ್ಗೆ ಕಾಳಜಿ ತೋರಬಹುದಾಗಿದೆ. ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ನೂತನ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿರುವ ಟೆಂಟ್‌ನಲ್ಲಿ ಜ್ಯೋತಿ ಹಾಗೂ ಪೋಷಕರು ವಾಸವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News