ಗೃಹರಕ್ಷಕ ದಳ ನೂತನ ಕಚೇರಿ ಕಟ್ಟಡಕ್ಕೆ ನಿವೇಶನ: ಎಸ್ಪಿ ಖರೆ
ಶಿವಮೊಗ್ಗ, ಡಿ.18: ಕರ್ನಾಟಕ ರಾಜ್ಯ ಗೃಹ ರಕ್ಷಕ ದಳ ಶಿವಮೊಗ್ಗ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ನಿವೇಶನ ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ ಅಶೋಕ್ ಖರೆ ತಿಳಿಸಿದ್ದಾರೆ.
ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಅಂಗವಾಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಗೃಹ ರಕ್ಷಕ ದಳ ದೇಶದ ಭದ್ರತೆಯ ಪ್ರಮುಖ ಪಡೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ ಗೃಹ ರಕ್ಷಕ ದಳದ ಕಚೇರಿ ಬಾಡಿಗೆ ಕಟ್ಟಡದಲ್ಲಿ ಇತ್ತು. ಇದೀಗ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಡಿಎಆರ್ ಸಭಾಂಗಣದ ಎದುರಿನ ಪೊಲೀಸ್ ಇಲಾಖೆ ನಿವೇಶನವನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಗೃಹ ರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಗಷ್ಟೆ ಅಲ್ಲದೆ, ಕಡಲು ಸೇನಾಪಡೆಯಲ್ಲ್ಲಿ ಗಡಿ ರಕ್ಷಣಾ ಪಡೆ ಸೇರಿದಂತೆ ವಿಪತ್ತು ಸಂದರ್ಭಗಳಲ್ಲೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಜೀವನ ನಿರ್ವಹಣೆಗಾಗಿ ಪ್ರಸ್ತುತ ನೀಡಲಾಗುವ ಗೌರವಧನ ಹೆಚ್ಚಳವಾಗಬೇಕಿದೆ ಎಂದರು.
ಭಾರತ ಚುನಾವಣಾ ಆಯೋಗ ಕೂಡ ಗೃಹ ರಕ್ಷಕ ದಳವನ್ನು ನಂಬಿಕಾರ್ಹ ಸಿಬ್ಬಂದಿ ಎಂದು ಪರಿಗಣಿಸಿದೆ. ಈ ನಿಟ್ಟಿನಲ್ಲಿ ಈ ದಳದ ಸೇವೆ ಪ್ರಶಂಸಾರ್ಹ ಎಂದರು.
ಗೃಹರಕ್ಷಕ ದಳದ ಸಮದೇಷ್ಠರಾದ ಎಸ್.ಶಿವಕುಮಾರ್ ಮಾತನಾಡಿ, ಗೃಹ ರಕ್ಷಕ ದಳ ಕೇವಲ ಪೊಲೀಸ್ ಇಲಾಖೆ ಅಥವಾ ಟ್ರಾಫಿಕ್ ನಿರ್ವಹಣೆ ಅಷ್ಟೇ ಅಲ್ಲದೆ, ರಾಷ್ಟ್ರೀಯ ವಿಪತ್ತು ಸಂದಭರ್ಗಳಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ.
ಇಂತಹ ನಿಸ್ವಾರ್ಥ ಸೇವಾ ಮನೋಭಾವದ ಇಲಾಖೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ವರೆಗೆ ಸ್ವಂತ ನಿವೇಶನ ಇರಲಿಲ್ಲ. ಸದ್ಯ ಜಿಲ್ಲಾ ಪೊಲೀಸ್ ಅಧೀಕ್ಷರಾದ ಅಭಿನವ್ ಖರೆ ತಮ್ಮ ಕಚೇರಿ ಪಕ್ಕದಲ್ಲೇ ಗೃಹ ರಕ್ಷಕ ದಳದ ಕಚೇರಿ ನಿರ್ಮಾಣಕ್ಕೆ ನಿವೇಶನ ನೀಡಿದ್ದಾರೆ. ಅಲ್ಲದೆ, ದಳದ ಪರೇಡ್ ಮತ್ತಿತರ ಚಟುವಟಿಕೆ ಭದ್ರಾವತಿ ಡಿಎಆರ್ ವ್ಯಾಪ್ತಿಯ ಎರಡು ಎಕರೆ ಪ್ರದೇಶವನ್ನು ನೀಡಿದ್ದು ಇಲಾಖೆ ಅವರಿಗೆ ಆಭಾರಿಯಾಗಿದೆ ಎಂದರು.
ಸೊರಬದ ನಿವೃತ್ತ ಡಿವಿಜನಲ್ ಕಮಾಂಡೆಂಟ್ ಡಾ.ಎಂ.ಕೆ. ಭಟ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್, ಮುಖ್ಯ ಬೋಧಕ ಹಾಲಪ್ಪ ದಾವಣಗೇರಿ ಉಪಸ್ಥಿತರಿದ್ದರು.
ಗೃಹರಕ್ಷಕ ದಳದಲ್ಲಿ ಒಂದು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಹಾಗೂ ಅಸಾಧಾರಣ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.