ಟ್ರಂಪ್‌ರಿಂದ ಸಹಾಯದ ನಿರೀಕ್ಷೆ: ಟಿಬೆಟ್ ಪ್ರಧಾನಿ ಲೋಬ್ಸಾಂಗ್
ಕಾರವಾರ, ಡಿ.18: ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಆಕ್ರಮಣ ಶೀಲತೆ ನೀತಿಯ ವಿರುದ್ಧವಾಗಿದ್ದಾರೆ ಎಂದು ಟಿಬೆಟಿಯನ್ ದೇಶಾಂತರ ಪ್ರಧಾನಿ ಡಾ. ಲೋಬ್ಸಾಂಗ್ ಸ್ಯಾಂಗೆ ಹೇಳಿದರು.
ಅವರು ರವಿವಾರ ಗೋವಾದ ಮಾರ್ಗವಾಗಿ ಮುಂಡಗೋಡಿಗೆ ತೆರಳುವ ಸಂದರ್ಭದಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಿಜವಾದ ವಿದೇಶಾಂಗ ನೀತಿ ಬಹಿರಂಗವಾಗಲಿದೆ. ಟಿಬೆಟಿಯನ್ ನಾಗರಿಕರು ಈ ಬಗ್ಗೆ ಆಶಾಭಾವನೆ ಹೊಂದಿದ್ದಾರೆ. ಅಮೆರಿಕದ ಹಿಂದಿನ ಅಧ್ಯಕ್ಷರ ಬಳಿ ನಾವು ಸಹಾಯ ಕೇಳಿದ್ದೆವು. ಟ್ರಂಪ್ ಚೀನಾದ ವಿರೋಧಿಯಾಗಿರುವ ಕಾರಣ ಟಿಬೇಟಿಯನ್ನರಿಗೆ ಸಹಾಯ ಮಾಡುವ ನಿರೀಕ್ಷೆ ಇದೆ ಎಂದರು.
ಟಿಬೇಟಿಯನ್‌ಗಳಿಗೆ ಆಶ್ರಯ ನೀಡಿರುವ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಟಿಬೆಟ್‌ನ ಡುಫುಂಗ್ ಮೊನೆಸ್ಟ್ರೀಯ 600ನೆ ವರ್ಷಾಚರಣೆಯ ನಿಮಿತ್ತ ಡಿ.21 ರಂದು ಜಗತ್ತಿನ ಎಲ್ಲೆಡೆಯ ಟಿಬೆಟಿಯನ್‌ರು ಪಾಲ್ಗೊಳ್ಳಲಿದ್ದಾರೆ ಎಂದರು. ಜಿಲ್ಲೆಯು ಪ್ರಾಕೃತಿಕ ಸೊಬಗಿನಿಂದ ಕೂಡಿದೆ.
ಇಲ್ಲಿನ ಕಡಲತೀರಗಳು ಜನಾಕರ್ಷಣೀಯವಾಗಿವೆ. ಇಲ್ಲಿನ ಜನರು ಬುದ್ಧಿವಂತರು ಜೊತೆಗೆ ಪ್ರೀತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ. ಮಾನವೀಯ ಅಂತಃಕರಣ ಹೊಂದಿದವರಾಗಿದ್ದು, ಟಿಬೆಟ್‌ನ 600ನೆ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಟಿಬೆಟ್‌ನ ಆಡಳಿತದ ಪ್ರಧಾನ ಕಾರ್ಯದರ್ಶಿ ಚೋರಾಲ್ ಟುಂಟೇನ್, ಅಪರ ಜಿಲ್ಲಾಕಾರಿ ಎಚ್. ಪ್ರಸನ್ನ, ಜಿ.ಪಂ. ಸಿಇಒ ಎಲ್.ಚಂದ್ರಶೇಖರ್, ಉಪವಿಭಾಗಾಧಿಕಾರಿ ಶಿವಾನಂದ್ ಮುಂತಾದವರಿದ್ದರು.