ಅಹಿಂಸಾ ತತ್ವವೇ ಇಸ್ಲಾಮ್‌ನ ಸಾರ: ಅಬ್ದುಲ್ ಖಾದರ್

Update: 2016-12-18 18:04 GMT

ಮೂಡಿಗೆರೆ, ಡಿ.18: ಮುಸ್ಲಿಮ್ ಧರ್ಮದಲ್ಲಿ ಎಲ್ಲ ಧರ್ಮಗಳಂತೆ ಪ್ರೀತಿ ಸೌಹಾರ್ದ ನಡೆಯುವುದೇ ಉತ್ತಮ ಜೀವನವಾಗಿದೆ. ಯಾವ ಪವಿತ್ರ ಗ್ರಂಥಗಳಲ್ಲೂ ಹಿಂಸೆಗೆ ಪ್ರಚೋದನೆಯಿಲ್ಲ. ಅಹಿಂಸಾ ಮಾರ್ಗದಲ್ಲಿ ನಡೆದು ಜೀವನದ ಸಾರ್ಥಕತೆಯನ್ನು ಬಯಸುವುದೇ ನಿಜವಾದ ಜೀವನವಾಗಿದೆ ಎಂದು ಕೊಟ್ಟಿಗೆಹಾರದ ಮಸೀದಿಯ ವೌಲ್ವಿ ಅಬ್ದುಲ್ ಖಾದರ್ ಹನೀಫಿ ಹೇಳಿದರು.


ಅವರು ಕೊಟ್ಟಿಗೆಹಾರ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಮೀಲಾದುನ್ನಬಿ ಪ್ರಯುಕ್ತ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದ ಮುಸ್ಲಿಮರಿಗೆ ಪ್ರವಚನ ನೀಡಿದರು. ಮುಹಮ್ಮದ್ ಪೈಗಂಬರ್ ಜನ್ಮದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಮುಸ್ಲಿಮರು ಅವರ ಆದರ್ಶಗಳನ್ನು ಪಾಲಿಸಿ ಉತ್ತಮ ಮಾರ್ಗ ಅನುಸರಿಸಬೇಕೆಂದರು.


ಟಿ.ಎ. ಖಾದರ್ ಹಾಜಿ ಮಾತನಾಡಿ, ಇಸ್ಲಾಮ್ ಯಾವುದೇ ಭಯೋತ್ಪಾದಕತೆಯನ್ನು ಪ್ರತಿಪಾದಿಸುವುದಿಲ್ಲ. ಆದರೆ ಕೆಲವರು ಧರ್ಮದ ಸಾರವನ್ನು ಅರಿಯದೇ ಹಿಂಸಾತ್ಮಕ ರೂಪದಲ್ಲಿ ನಡೆದು ಮುಹಮ್ಮದ್ ಪೈಗಂಬರ ಆದರ್ಶಗಳನ್ನು ಗಾಳಿಗೆ ತೂರಿ ಧರ್ಮದ ಹೆಸರಿಗೆ ಕಪ್ಪುಚುಕ್ಕೆ ತರುತ್ತಿದ್ದಾರೆ. ಇದು ಸಲ್ಲದು. ನಾವೆಲ್ಲರೂ ಒಂದೇ ಗೂಡಿನ ಹಕ್ಕಿಗಳು. ಒಂದೇ ಗಾಳಿಯನ್ನು ಸೇವಿಸುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಸಾಮರಸ್ಯ ಜೀವನ ನಡೆಸಬೇಕು. ಆಗ ಮಾತ್ರ ಮೀಲಾದುನ್ನಬಿಯನ್ನು ಆಚರಿಸಿದರೆ ಒಳ್ಳೆಯ ಅರ್ಥ ಸಿಗುತ್ತದೆ ಎಂದು ನುಡಿದರು.


ಅತಿಥಿಗಳಾದ ಹಮೀದ್ ವೌಲ್ವಿ ಮಾತನಾಡಿ, ಝಕಾತ್ ಅನುಸರಿಸುವ ಮೂಲಕ ಸಮಾಜದಲ್ಲಿ ಶೋಷಿತ ವರ್ಗವನ್ನು ಮೇಲೆತ್ತುವ ಕಾರ್ಯ ಮಾಡಬಹುದು. ಸಹಬಾಳ್ವೆ ಇಸ್ಲಾಮ್‌ನ ಮೂಲ ಧ್ಯೇಯವಾಗಬೇಕು. ಮುಸ್ಲಿಮರು ಎಂದಾಕ್ಷಣ ಭಯೋತ್ಪಾದನೆ ಪ್ರತಿಬಿಂಬಿಸುವ ವ್ಯಕ್ತಿಗಳು ಎಂದು ಯಾರೂ ಬೆರಳು ತೋರದಂತೆ ನಾವು ಜೀವನದಲ್ಲಿ ನಡೆಯಬೇಕಿದೆ. ಆಗ ಮಾತ್ರ ಸನ್ಮಾರ್ಗದ ಅರಿವು ನಮಗೆ ಗೋಚರಿಸುತ್ತದೆ ಎಂದು ತಿಳಿಸಿದರು.


ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಕ್ವಿಝ್, ಭಾಷಣ ಸ್ಪರ್ಧೆ, ಭಕ್ತಿಗೀತೆಗಳು ಮುಂತಾದ ಸ್ಪರ್ಧಾತ್ಮಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಮುಹಮ್ಮದ್ ಸಿದ್ದೀಕ್, ಮುಹಮ್ಮದ್ ಹಾಜಿ, ಮೊಹಿದ್ದಿನ್ ಮೂಸಬ್ಬ, ಹಸೇನ್ ಹಾಜಿ, ಅಬ್ದುಲ್ಲಾ, ಅಬ್ಬಾಸ್, ಮುನೀರ್, ಕುಂಜಿಮೋಣು, ಖಾಲಿದ್, ಸುಲೈಮಾನ್, ಅಬ್ದುಲ್ ಖಾದರ್, ಸಾದಿಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News