ಹಿಮಾಚಲ ಪ್ರದೇಶದಲ್ಲಿ ಕೊಡಗಿನ ಯೋಧ ಅನುಮಾನಾಸ್ಪದ ಸಾವು

Update: 2016-12-19 12:38 GMT

ಮಡಿಕೇರಿ ಡಿ.19 :   ಹಿಮಾಚಲ ಪ್ರದೇಶದ ಕುಲುಮನಾಲಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಜಿಲ್ಲೆಯ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

 ವೀರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದ ನಿವಾಸಿ ಶಶಿ ಮತ್ತು ವತ್ಸಲ ದಂಪತಿಗಳ ಪುತ್ರ ಕೆ.ಎಸ್.ರಾಜೇಶ್(29) ಎಂಬುವವರೆ ದುರ್ಮರಣಕ್ಕೀಡಾಗಿರುವ ಯೋಧ.

ಇವರ ಪಾರ್ಥಿವ ಶರೀರ ಮಂಗಳವಾರ ಅಥವಾ ಬುಧವಾರ ಬರುವ ಸಾಧ್ಯತೆಗಳಿದೆ.

 2007ರಲ್ಲಿ ಎಂಇಜಿಗೆ ಸೇರ್ಪಡೆಗೊಂಡಿದ್ದ ರಾಜೇಶ್ ಕುಲುಮನಾಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಿ.17 ರಂದು ರಾತ್ರಿ ಮೂತ್ರ ವಿಸರ್ಜನೆಗೆಂದು ತೆರಳಿದ್ದವರು ವಾಪಾಸಾಗದೆ ಇದ್ದುದನ್ನು ಗಮನಿಸಿದ ಸಹಪಾಠಿಗಳು ಹೊರಗೆ ತೆರಳಿ ಪರಿಶೀಲಿಸಿದಾಗ ರಾಜೇಶ್ ಅವರು ಬೆಟ್ಟದಿಂದ ಉರುಳಿ ಸಾವನ್ನಪ್ಪಿರುವುದು ಗೋಚರಿಸಿತು. ಸುಮಾರು 500 ಮೀ. ಆಳದಲ್ಲಿ ಮೃತದೇಹ ಕಂಡು ಬಂದಿದ್ದು, ತಲೆ ಹಾಗೂ ಬೆನ್ನಿಗೆ ತೀವ್ರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ರಾಜೇಶ್ ಮೂತ್ರ ವಿಸರ್ಜನೆಗೆಂದು ತೆರಳಿದ್ದಾಗ ಬೆಟ್ಟದಿಂದ ಕೆಳಕ್ಕುರುಳಿ ಸಾವನ್ನಪ್ಪಿರಬಹುದೆಂದು ಸಹಪಾಠಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಕುಲುಮನಾಲಿಯಲ್ಲಿ ಮೈನಸ್ -17 ಡಿಗ್ರಿ ಉಷ್ಣಾಂಶವಿರುವುದರಿಂದ ಯೋಧನ ಮೃತದೇಹ ಸಾಗಾಟಕ್ಕೆ ಅಡಚಣೆ ಉಂಟಾಗಿದೆ ಎಂದು ತಿಳಿದು ಬಂದಿದೆ. ಮುಖ್ಯ ಕೇಂದ್ರ್ರ ಪನಾಲಿ ಕೋಸ್ಟ್‌ಗೆ ಮೃತದೇಹ ತಲುಪಲು 300 ಕಿ.ಮೀ. ಕ್ರಮಿಸಬೇಕು. ಅಲ್ಲಿಂದ ಚಂಡೀಘಡಕ್ಕೆ ಸೋಮವಾರ ಬಂದು, ಬಳಿಕ ಬೆಂಗಳೂರು ಮಾರ್ಗವಾಗಿ ಎರಡು ದಿನಗಳಲ್ಲಿ ಮೃತ ದೇಹ ಸ್ವಗ್ರಾಮಕ್ಕೆ ಬರುವ ಸಾಧ್ಯತೆಗಳಿದೆ.

 ಡಿ.17 ರಂದು ರಾಜೇಶ್ ಮೂತ್ರ ವಿಸರ್ಜನೆಗೆ ತೆರಳುವ ಮೊದಲು ಪತ್ನಿ ಶಿಲ್ಪ ಅವರೊಂದಿಗೆ 18 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

ಮೃತರು ಪತ್ನಿ ಹಾಗೂ ಒಂದು ವರ್ಷ 8 ತಿಂಗಳ ಪುತ್ರಿ ಇಂಚರಾಳನ್ನು ಅಗಲಿದ್ದಾರೆ.

ಯೋಧ ರಾಜೇಶ್ ಅವರ ತಂದೆ ಮತ್ತು ತಾಯಿ ಕೂಲಿ ಕಾರ್ಮಿಕರಾಗಿದ್ದು, ಪತ್ನಿ ಹಾಗೂ ಪುತ್ರಿ ಬೇತ್ರಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಮೃತರಿಗೆ ಇಬ್ಬರು ಸಹೋದರಿಯರು ಇದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News