ಪ್ರಭಾವಿಗಳಿಂದ ಭಾರೀ ಪ್ರಮಾಣದ ಕೆರೆ ಒತ್ತುವರಿ
ನಗರ ವ್ಯಾಪ್ತಿಯಲ್ಲಿ ತೆರವಿಗೆ ಹಿಂದೇಟು
ಒತ್ತುವರಿ ತೆರವಿಗೆ ಡಿಸಿಯಿಂದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಬಿ. ರೇಣುಕೇಶ್
ಶಿವಮೊಗ್ಗ, ಡಿ.19: ಪ್ರಸ್ತುತ ಜಿಲ್ಲೆಯಾದ್ಯಂತ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಳೀಯ ತಾಲೂಕು ಆಡಳಿತಗಳು ನಡೆಸಲಾರಂಭಿಸಿವೆ. ಡಾ. ಎಂ. ಲೋಕೇಶ್‌ರವರು ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಿದ್ದು, ತಿಂಗಳಲ್ಲಿ ಇಂತಿಷ್ಟು ದಿನಗಳ ಕಾಲ ತಮ್ಮ ತಾಲೂಕು ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದರ ಪರಿಣಾಮವಾಗಿ ಇಷ್ಟು ದಿನ ಅಕ್ಷರಶಃ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನೇ ಮರೆತಂತಿದ್ದ ತಾಲೂಕು ಆಡಳಿತಗಳು, ಇದೀಗ ತಮ್ಮ ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವಿಗೆ ಕಾರ್ಯೋನ್ಮುಖವಾಗಿವೆ. ಇದಕ್ಕೆ ಜಿಲ್ಲೆಯ ನಾಗರಿಕ ವಲಯದಿಂದ ಮುಕ್ತಕಂಠದ ಶ್ಲಾಘನೆ ಕೂಡ ವ್ಯಕ್ತವಾಗುತ್ತಿದೆ. ಕೆರೆಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಮಹತ್ತರ ನಿರ್ಧಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ ವಾದುದಾಗಿದೆ.
ಆದರೆ ಜಿಲ್ಲಾ ಕೇಂದ್ರವಾದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ನಡೆದಿರುವ ಕೆರೆಗಳ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರಗಿಸದಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಕ್ಕೆ ಎಡೆ ವಾಡಿಕೊಟ್ಟಿದೆ. ತಾಲೂಕು ಆಡಳಿತವಾಗಲಿ ಇಲ್ಲವೇ ಮಹಾನಗರ ಪಾಲಿಕೆ ಆಡಳಿತವಾಗಲಿ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದಿರುವುದು, ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿರುವುದು ಹಲವು ರೀತಿಯ ಚರ್ಚೆಗಳಿಗೆ ಆಸ್ಪದವಾಗಿದೆ.
ಭಾರೀ ಒತ್ತುವರಿ: ಜಿಲ್ಲೆಯ ಇತರ ನಗರ-ಪಟ್ಟಣಗಳಿಗೆ ಹೋಲಿಕೆ ಮಾಡಿದರೆ, ಶಿವಮೊಗ್ಗ ನಗರದಲ್ಲಿ ದೊಡ್ಡ ಪ್ರಮಾಣದ ಕೆರೆಗಳನ್ನು ಕಬಳಿಸಲಾಗಿದೆ. ಹಲವೆಡೆ ಕೆರೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗಿವೆ. ಎಲ್ಲದಕ್ಕಿಂತ ವಿಶೇಷವೆಂದರೇ ಕೆರೆಗಳನ್ನು ಉಳಿಸಿ, ಸಂರಕ್ಷಣೆ ಮಾಡಬೇಕಾದ ಗುರುತ ಜವಾಬ್ದಾರಿ ಹೊತ್ತಿರುವ ಜಿಲ್ಲಾಡಳಿತವೇ ಹಲವು ಸರಕಾರಿ ಕಚೇರಿ, ಸಂಘಸಂಸ್ಥೆಗಳಿಗೆ ಕೆರೆಗಳನ್ನು ಧಾರೆ ಎರೆದು ಕೊಟ್ಟಿದ್ದು, ಇಂತಹ ಕೆರೆಗಳ ಪ್ರದೇಶಗಳಲ್ಲಿ ಬೃಹದಾಕಾರದ ಕಟ್ಟಡಗಳು ತಲೆಎತ್ತಿವೆ!
ಇನ್ನೊಂದೆಡೆ ಕೆಲ ಭೂಗಳ್ಳರು ವ್ಯವಸ್ಥಿತವಾಗಿ ಕೆರೆಗಳನ್ನು ಮುಚ್ಚಿ ಲೇಔಟ್ ನಿರ್ಮಿಸುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಜಾಗಗಳಲ್ಲಿ ನಿವೇಶನ ರಚಿಸಿ ಪರಭಾರೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಕೆರೆ ಜಾಗ ಕಬಳಿಸಿ ಮನೆ, ಕಟ್ಟಡಗಳ ನಿರ್ಮಾಣ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದಕ್ಕೆ ಕೆಲ ಭ್ರಷ್ಟ ಅಧಿಕಾರಿಗಳು ಕೂಡ ಕುಮ್ಮಕ್ಕು ನೀಡುತ್ತಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿವೆ. ಜ್ವಲಂತ ನಿದರ್ಶನ: ನಗರದ ಹೊರವಲಯ ಗಾಡಿಕೊಪ್ಪದಲ್ಲಿ ಜಿಲ್ಲಾಧಿಕಾರಿಗಳೇ ಗೌರವಾಧ್ಯಕ್ಷರಾಗಿರುವ ಪ್ರತಿಷ್ಠಿತ ಕ್ಲಬ್‌ವೊಂದಕ್ಕೆ ಕಳೆದ ಹಲವು ವರ್ಷಗಳ ಹಿಂದೆ ನೀರಿನಿಂದ ತುಂಬಿ ತುಳುಕುತ್ತಿದ್ದ ಕೆರೆಯ ಪ್ರದೇಶವನ್ನು ಲೀಸ್ ಆಧಾರದ ಮೇಲೆ ನೀಡಲಾಗಿತ್ತು.
ಕ್ಲಬ್‌ನವರು ಕೆರೆಗೆ ಮಣ್ಣು ತುಂಬಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಕೆರೆಯ ಇಕ್ಕೆಲಗಳಲ್ಲಿ ಖಾಸಗಿಯವರು ಒತ್ತುವರಿ ಮಾಡುತ್ತಿದ್ದು, ಹೇಳುವವರು ಕೇಳುವವರ್ಯಾರೂ ಇಲ್ಲದಂತಾಗಿದೆ. ಇದೇ ಗಾಡಿಕೊಪ್ಪದ ಗೋಪಾಲಗೌಡ ಬಡಾವಣೆಗೆ ಹೊಂದಿ ಕೊಂಡಂತೆ ಜಿಲ್ಲಾಡಳಿತವೇ ಕೆರೆಯ ಪ್ರದೇಶವನ್ನು ಸರಕಾರಿ ಕಚೇರಿಗಳಿಗೆ ನೀಡಿದೆ.
ಕೆಆರ್‌ಐಡಿಎಲ್ ಕಚೇರಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣವಾಗುತ್ತಿವೆ. ಒಟ್ಟಾರೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಕೆರೆಗಳು ಒತ್ತುವರಿಯಾಗಿವೆ. ಕೆಲ ಕೆರೆಗಳ ಅಕ್ಷರಶಃ ಕಣ್ಮರೆಯಾಗಿವೆ. ಉಳಿದ ಕೆಲ ಕೆರೆಗಳು ಕೂಡ ಅಪಾಯದಂಚಿನಲ್ಲಿವೆ. ಇನ್ನಾದರು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೆರೆಗ
ಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂಬು ವುದು ಪರಿಸರ ಪ್ರೇಮಿಗಳು, ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ. ಉಳಿದಿರುವುದು ಕೇವಲ 30 ಕೆರೆಗಳು
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸರಿಸುಮಾರು 110ಕ್ಕೂ ಅಧಿಕ ಕೆರೆಗಳಿವೆ ಎಂದು ಮಹಾನಗರ ಪಾಲಿಕೆ ಆಡಳಿತ ಹೇಳುತ್ತದೆ. ಆದರೆ ಜೀವಂತವಾಗಿರುವುದು 20ರಿಂದ 30 ಕೆರೆಗಳು ಮಾತ್ರವಾಗಿವೆ. ಮುಕ್ಕಾಲು ಪಾಲು ಕೆರೆಗಳು ಒತ್ತುವರಿಯಾಗಿವೆ.
ಮತ್ತೆ ಕೆಲವು ಒತ್ತುವರಿಯ ಹಂತದಲ್ಲಿವೆ. ಮಹಾನಗರ ಪಾಲಿಕೆ ಆಡಳಿತಕ್ಕಂತೂ ಕೆರೆ ಸಂರಕ್ಷಣೆಯ ಯಾವುದೇ ಆಸಕ್ತಿ ಇಲ್ಲವಾಗಿದೆ. ಉಳಿದಂತೆ ತಾಲೂಕು ಆಡಳಿತವು ಗಮನಹರಿಸುತ್ತಿಲ್ಲ. ಇನ್ನೊಂದೆಡೆ ಭೂಗಳ್ಳರು ಕೆರೆಗಳ ಕಬಳಿಕೆ ಮುಂದುವರಿಸಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಕೆರೆಗಳೇ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಲಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಅಣ್ಣಾ ಹಝಾರೆ ಹೋರಾಟ ಸಮಿತಿಯ ಮುಖಂಡ ಅಶೋಕ್ ಯಾದವ್‌ರವರು ಆಗ್ರಹಿಸುತ್ತಾರೆ.
ಕೆರೆ ಒತ್ತುವರಿ ತೆರವು ನಾಟಕ
ಈ ಹಿಂದೆ ನಾಗರಿಕ ವಲಯದಿಂದ ವ್ಯಕ್ತವಾದ ಭಾರೀ ಒತ್ತಡದ ನಂತರ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮುಂದಾಗಿತ್ತು. ಇದಕ್ಕೆ ಭಾರೀ ಪ್ರಚಾರ ಕೂಡ ದೊರಕಿತ್ತು. ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸುವುದಾಗಿ ಕಾರ್ಯಾಚರಣೆಯ ನೇತೃತ್ವವಹಿಸಿದ್ದ ಅಧಿಕಾರಿಗಳು ಘೋಷಿಸಿದ್ದರು. ನೆಪಮಾತ್ರಕ್ಕೆ ಒಂದೆರೆಡು ಕೆರೆಗಳ ಒತ್ತುವರಿ ತೆರವು ಮಾಡಿದ ಅಧಿಕಾರಿಗಳ ತಂಡವು ನಂತರ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.