ಹೇಳಿಕೆಗಳಿಗೆ ಸೀಮಿತವಾದ ಶಿವಮೊಗ್ಗ-ಹರಿಹರ ರೈಲು ಮಾರ್ಗ
ಸಂಸದರ ವಿರುದ್ಧ ಹಿತರಕ್ಷಣಾ ವೇದಿಕೆ ಒಕ್ಕೂಟ ಆಕ್ರೋಶ
ಶಿವಮೊಗ್ಗ, ಡಿ. 19: ಮಲೆನಾಡು ಹಾಗೂ ಮಧ್ಯ ಕರ್ನಾಟಕದ ನಡುವಿನ ರೈಲ್ವೆ ಸಂಪರ್ಕದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿರುವ ಶಿವಮೊಗ್ಗ - ಹರಿಹರ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ ಈಗಾಗಲೇ ಹಸಿರು ನಿಶಾನೆ ತೋರಿಸಿ ನಾಲ್ಕೈದು ವರ್ಷಗಳಾಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಯೋಜನೆ ಕಾರ್ಯಗತಗೊಂಡಿಲ್ಲ. ಸಂಪೂರ್ಣವಾಗಿ ನನೆಗುದಿಗೆ ಬಿದ್ದಿದ್ದು, ಸದ್ಯಕ್ಕೆ ಟೇಕಾಫ್ ಆಗುವ ಯಾವುದೇ ಲಕ್ಷಣಗಳು ಗೋಚರ ವಾಗುತ್ತಿಲ್ಲ.
]ಈ ನಡುವೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು ಶಿವಮೊಗ್ಗ - ಹರಿಹರ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದುಕೊಂಡಿದೆ. ‘ಆರ್‌ಟಿಐನಡಿ ಪಡೆದುಕೊಂಡಿರುವ ವಿವರ ಗಮನಿಸಿದರೆ, ಈ ಯೋಜನೆಯ ಅನುಷ್ಠಾನಕ್ಕೆ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂ ರಪ್ಪರವರು ಗಂಭೀರ ಪ್ರಯತ್ನ ನಡೆಸಿಲ್ಲ. ಇದರಿಂದ ಇಡೀ ಯೋಜನೆ ನನೆಗುದಿಗೆ ಬೀಳುವಂತಾಗಿದೆ’ ಎಂದು ಆರೋಪಿಸಿದೆ.
ಭೂ ಸ್ವಾಧೀನ ಇಲಾಖೆಯ ಮಾಹಿತಿ ಪ್ರಕಾರ ನಾಲ್ಕೈದು ವರ್ಷಗಳಿಂದ ಶಿವಮೊಗ್ಗ ತಾಲೂಕಿನ 10 ಗ್ರಾಮಗಳಲ್ಲಿ ಕೇವಲ 2 ಕಡೆ ಮಾತ್ರ ಭೂ ಸ್ವಾಧೀನದ ಬಗ್ಗೆ ಗೆಜೆಟ್ ಪ್ರಟನೆಯಾಗಿದೆ. ಆದರೆ ಉಳಿದೆಡೆ ಭೂ ಸ್ವಾಧೀನ ಪ್ರಕ್ರಿಯೆಯೇ ಆಗಿಲ್ಲ. ಇದಕ್ಕೆ ಕಾರಣ ತಿಳಿಯದಾಗಿದೆ. ಈ ಬಗ್ಗೆ ಸಂಸದರು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಈ ಮಹತ್ತರ ಯೋಜನೆಯು ಕೇವಲ ಹೇಳಿಕೆಗಳಿಗೆ ಸೀಮಿತವಾಗಿದೆ. ಇದೆಲ್ಲವನ್ನು ಗಮನಿಸಿದರೆ ಕೇವಲ ರಾಜಕೀಯ ಉದ್ದೇಶಕ್ಕೆ ಮಾತ್ರ ಈ ಯೋಜನೆ ಬಳಸಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನಾದರೂ ಸಂಸ ದರು ಈ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡಬೇಕು.
ನಿರ್ಲಕ್ಷ್ಯ ಧೋರಣೆ ಕೈಬಿಡಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
78 ಕಿ.ಮೀ. ಉದ್ದದ ಮಾರ್ಗ ಶಿವಮೊಗ್ಗ-ಹರಿಹರ ನಡುವೆ ಸುಮಾರು 78 ಕಿ.ಮೀ. ಉದ್ದದ ನೂತನ ರೈಲ್ವೆ ಮಾರ್ಗ ನಿರ್ಮಾಣವನ್ನು ಕೇಂದ್ರ - ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರ ಸರಕಾರವು ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಕಳೆದ ಬಜೆಟ್‌ನಲ್ಲಿ ಅನುದಾನ ಕೂಡ ಮೀಸಲಿರಿಸಿತ್ತು. ಆದರೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣದಿಂದ ಇಲ್ಲಿಯವರೆಗೂ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.
ಮತ್ತೊಂದೆಡೆ ರಾಜ್ಯದಲ್ಲಿ ಅನುಷ್ಠಾನವಾಗುವ ರೈಲ್ವೆ ಯೋಜನೆಗಳಿಗೆ ವೆಚ್ಚವಾಗುವ ಪೂರ್ಣ ಹಣವನ್ನು ಕೇಂದ್ರ ಸರಕಾರವೇ ಭರಿಸಬೇಕು. ಸಹಭಾಗಿತ್ವದ ಯೋಜನೆಗಳಿಗೆ ರಾಜ್ಯ ಸರಕಾರ ಅನುದಾನ ನೀಡುವುದು ಕಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಹಿಂದೆ ಸ್ಪಷ್ಟಪಡಿಸಿದ್ದರು. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ - ಹರಿಹರ ನಡುವಿನ ರೈಲ್ವೆ ಮಾರ್ಗ ನನೆಗುದಿಗೆ ಬೀಳುವಂತಾಗಿದೆ.