×
Ad

ಶಿವಮೊಗ್ಗ: ಟೆಂಡರ್ ನಡೆಸದೆ ಕಾಮಗಾರಿ ಹಸ್ತಾಂತರ ಪ್ರಕರಣ

Update: 2016-12-19 23:09 IST

ಬಿ. ರೇಣುಕೇಶ್
ಶಿವಮೊಗ್ಗ, ಡಿ. 19: ಕೋಟ್ಯಂತರ ರೂ. ಮೊತ್ತದ ಎರಡು ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆ ನಿರ್ಮಿತಿ ಕೇಂದ್ರಕ್ಕೆ ನೇರವಾಗಿ ಹಸ್ತಾಂತರಿಸುವ ಶಿವಮೊಗ್ಗ ಮಹಾನಗರ ಪಾಲಿಕೆಯ ನಿರ್ಧಾರಕ್ಕೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ತಡೆ ನೀಡಿದ್ದು, ಇ-ಟೆಂಡರ್ ಪ್ರಕ್ರಿಯೆಯ ಮೂಲಕವೇ ಗುತ್ತಿಗೆ ಹಂಚಿಕೆ ಮಾಡುವಂತೆ ಪಾಲಿಕೆ ಆಡಳಿತಕ್ಕೆ ಸ್ಪಷ್ಟ ಆದೇಶ ಹೊರಡಿಸಿದೆ. ಭಾರೀ ಮೊತ್ತದ ಎರಡು ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆ ನೇರವಾಗಿ ನಿರ್ಮಿತಿ ಕೇಂದ್ರಕ್ಕೆ ನೀಡುವ ಮಹಾನಗರ ಪಾಲಿಕೆ ಆಡಳಿತದ ನಿರ್ಧಾರಕ್ಕೆ ಸ್ವತಃ ಕೆಲ ಕಾರ್ಪೊರೇಟರ್‌ಗಳು ತೀವ್ರ ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದ್ದರು.

ಜೊತೆಗೆ ಪಾಲಿಕೆಯ ಈ ಕ್ರಮವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡು ಮಾಡಿತ್ತು. ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ, ಈ ಹಿಂದೆ ನಿರ್ಮಿತಿ ಕೇಂದ್ರಕ್ಕೆ ಪಾಲಿಕೆಯ ಯಾವುದೇ ಕಾಮಗಾರಿ ನೀಡದಂತೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಪೌರಾಡಳಿತ ನಿರ್ದೇಶನಾಲಯ ಕೂಡ ಭಾರೀ ಮೊತ್ತದ ಕಾಮಗಾರಿಗಳನ್ನು ಇ-ಪ್ರೊಕ್ಯೂರ್‌ಮೆಂಟ್ ಮೂಲಕವೇ ನಡೆಸುವಂತೆ ಸ್ಥಳೀಯಾಡಳಿತಗಳಿಗೆ ನಿರ್ದೇಶನ ನೀಡಿತ್ತು. ಈ ನಡುವೆ ತಾನೇ ಕೈಗೊಂಡ ನಿರ್ಣಯಕ್ಕೆ ವಿರುದ್ಧ್ದವಾಗಿ ಹಾಗೂ ಪೌರಾಡಳಿತ ವಿಭಾಗದ ನಿರ್ದೇಶನಗಳಿಗೆ ವಿರುದ್ಧವಾಗಿ ಮಹಾನಗರ ಪಾಲಿಕೆ ಆಡಳಿತವು ಸುಮಾರು 9 ಕೋಟಿ ರೂ. ಮೊತ್ತದ ಎರಡು ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆ ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಿತ್ತು.

ಈ ಕುರಿತಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಪೌರಾ
ಳಿತ ನಿರ್ದೇಶನಾಲಯದ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು. ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿತ್ತು. ಕೆಲ ಕಾರ್ಪೊರೇಟರ್‌ಗಳು ಈ ಎರಡು ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಗುತ್ತಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿದ್ದರು. ಆದರೆ ಇದಕ್ಕೆ ಮೇಯರ್ ಎಸ್.ಕೆ.ಮರಿಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ನಿರ್ಮಿತಿ ಕೇಂದ್ರಕ್ಕೆ ನೀಡುವ ಕ್ರಮ ಸಮರ್ಥಿಸಿಕೊಂಡಿದ್ದರು. ಆದೇಶ: ಈ ನಡುವೆ ಪೌರಾಡಳಿತ ನಿರ್ದೇಶನಾಲಯವು ಟೆಂಡರ್ ಇಲ್ಲದೆ ನೇರವಾಗಿ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡುವ ಪಾಲಿಕೆಯ ನಿರ್ಧಾರವನ್ನು ತಿರಸ್ಕರಿಸಿದ್ದು, ಇ-ಪ್ರೊಕ್ಯೂರ್‌ಮೆಂಟ್ ಮೂಲಕವೇ ಗುತ್ತಿಗೆ ಹಂಚಿಕೆ ಮಾಡುವಂತೆ ಸ್ಪಷ್ಟ ಆದೇಶ ಹೊರಡಿಸಿದೆ. ಇದು ಪಾಲಿಕೆ ಆಡಳಿತಕ್ಕೆ ತೀವ್ರ ಹಿನ್ನಡೆಯಾಗಿದ್ದು, ಇದೀಗ ಈ ಎರಡು ಕಾಮಗಾರಿಗಳ ಗುತ್ತಿಗೆಯನ್ನು ಇ-ಪ್ರೊಕ್ಯೂರ್‌ಮೆಂಟ್ ಮೂಲಕವೇ ಹಂಚಿಕೆ ಮಾಡುವುದು ಅನಿವಾರ್ಯವಾಗಿದೆ.

ಟೆಂಡರ್ ನಡೆಸುವಂತೆ ಆದೇಶ: ಪ್ರಮೋದ್ ಕುಮಾರ್ಸಿದ್ದೇಶ್ವರ ನಗರದಲ್ಲಿ ಪೌರ ಕಾರ್ಮಿಕರ ಕಲ್ಯಾಣ ಭವನ ಕಟ್ಟಡ ನಿರ್ಮಾಣಕ್ಕೆ 3.54 ಕೋಟಿ ರೂ. ಹಾಗೂ ಗಾರ್ಡನ್ ಏರಿಯಾದಲ್ಲಿ ಹೂ, ಹಣ್ಣು, ತರಕಾರಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ 5.63 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಇ-ಪ್ರೊಕ್ಯೂರ್‌ಮೆಂಟ್ ಮೂಲಕ ನಡೆಸುವಂತೆ ಮಹಾನಗರ ಪಾಲಿಕೆ ಆಡಳಿತಕ್ಕೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಟೆಂಡರ್ ಇಲ್ಲದೆ ನಿರ್ಮಿತಿ ಕೇಂದ್ರಕ್ಕೆ ನೇರವಾಗಿ ನೀಡುವ ನಿರ್ಣಯವನ್ನು ರದ್ದುಪಡಿಸಿದ್ದಾರೆ’ ಎಂದು ಜಿಲ್ಲಾ ನಗರಾಭಿವೃದ್ಧ್ದಿ ಕೋಶದ ಯೋಜನಾ ನಿರ್ದೇಶಕರಾದ ಹೆಚ್.ಪಿ.ಪ್ರಮೋದ್‌ಕುಮಾರ್‌ರವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News