'ನಮ್ಮ ಹಳ್ಳಿಯನ್ನು ಅಭಿವೃದ್ಧಿಪಡಿಸಿ' : ವಿದ್ಯಾರ್ಥಿನಿಯಿಂದ ಪ್ರಧಾನಿಗೆ ಪತ್ರ
ಚಿಕ್ಕಮಗಳೂರು, ಡಿ.20: ನಮ್ಮ ಹಳ್ಳಿಯನ್ನು ಅಭಿವೃದ್ಧಿಪಡಿಸಿ ಎಂದು ವಿದ್ಯಾರ್ಥಿನಿಯೊಬ್ಬಳು ಬರೆದ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.
ಜಾವಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಆಲೆಖಾನ್ ಹೊರಟ್ಟಿ ಎಂಬ ಪುಟ್ಟ ಹಳ್ಳಿಯ ನಿವಾಸಿ ಗೋಪಾಲ್‌ಗೌಡ ಮತ್ತು ಪವಿತ್ರ ದಂಪತಿಯ ಪುತ್ರಿ ನಮನ ಜಿ. ಪ್ರಧಾನಿಗೆ ಇತ್ತೀಚೆಗೆ ಪತ್ರ ಬರೆದಿದ್ದಳು. ಈಕೆ ಬಿದರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ 10ನೆ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಆಲೆಖಾನ್ ಹೊರಟ್ಟಿಯು ಚಾರ್ಮಾಡಿ ಗುಡ್ಡಬೆಟ್ಟಗಳ ಸಾಲುಗಳ ನಡುವೆ ಇದೆ. ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಆಲೆಖಾನ್ ಹೊರಟ್ಟಿಗೆ ಕಚ್ಚಾರಸ್ತೆಯಲ್ಲಿ ಸುಮಾರು 5 ರಿಂದ 6 ಕಿ.ಮೀ.ವರೆಗೆ ಕಾಲ್ನಡಿಗೆಯಲ್ಲಿ ಸಂಚರಿಸಬೇಕಾಗಿದೆ.
ಆಲೆಖಾನ್ ಹೊರಟ್ಟಿ ಎಂಬ ಕುಗ್ರಾಮಕ್ಕೆ ಡಾಂಬರು ರಸ್ತೆ ಇಲ್ಲ. ಅಂಗನವಾಡಿ ಕೇಂದ್ರವಿಲ್ಲ, ದೂರವಾಣಿ, ಮೊಬೈಲ್, ವಿದ್ಯುತ್, ವಾಹನ ಸಂಪರ್ಕವಂತೂ ಇಲ್ಲವೇ ಇಲ್ಲ. ಅಲ್ಲದೇ ಕುಡಿಯುವ ನೀರು ಸರಬರಾಜು ಕೂಡ ನಡೆಯುವುದಿಲ್ಲ. ಇಲ್ಲಿನ ಜನರು ನೈಸರ್ಗಿಕ ನೀರನ್ನು ಬಳಸುತ್ತಾರೆ. ಬೆರಳೆಣಿಕೆಯ ಕೆಲವು ಮನೆಗಳಲ್ಲಿ ಮಾತ್ರ ಸೋಲಾರ್ ಲೈಟ್‌ಗಳು ಉರಿಯುತ್ತವೆ. ಒಂದೆರಡು ಮನೆಗಳಲ್ಲಿ ಮೊಬೈಲ್ ಇದೆಯಾದರೂ ನೆಟ್‌ವರ್ಕ್ ಸಮಸ್ಯೆಯಿದೆ. ಈ ಹಳ್ಳಿಯ ಚಿಕ್ಕ-ಪುಟ್ಟ ಮಕ್ಕಳು 4ನೆ ತರಗತಿಯ ಪ್ರಾಥಮಿಕ ಹಂತದ ಶಾಲೆ ಮುಕ್ತಾಯ ಬಳಿಕ ದೂರದ ವಸತಿ ಶಾಲೆಗಳು ಅಥವಾ ನೆಂಟರ ಮನೆಗಳಲ್ಲಿ ವಸತಿ ಪಡೆದು ಶಾಲೆಗಳಿಗೆ ತೆರಳುವಂತಹ ದುಸ್ಥಿತಿ ಇಲ್ಲಿನದ್ದಾಗಿದೆ. ಇಲ್ಲಿಂದ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಬಳಿಕ ಕಾಲೇಜುಗಳಿಗೆ ತೆರಳಲು ಪ್ರತಿನಿತ್ಯ ಐದಾರು ಕಿ.ಮೀ. ದೂರವನ್ನು ಕಾಡು ರಸ್ತೆಯಲ್ಲಿ ಒಬ್ಬಂಟಿಗಳಾಗಿ ಸಂಚರಿಸಲಾಗದೇ ಹೈರಾಣವಾಗುವುದು ಈ ಪುಟ್ಟ ಹಳ್ಳಿ ಆಲೇಖಾನ್ ಹೊರಟ್ಟಿಯ ನಿವಾಸಿಗಳದ್ದಾಗಿದೆ. ಕುಗ್ರಾಮದ ಜನರು ಸಣ್ಣಪುಟ್ಟ ವಸ್ತುಗಳ ಖರೀದಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರಲು ಕೊಟ್ಟಿಗೆ ಹಾರ ತನಕ ಕಾಲ್ನಡಿಗೆ ಮೂಲಕ ನಡೆದು ಬರಬೇಕಾದ ದುಸ್ಥಿತಿ ಇಲ್ಲಿನ ಜನರನ್ನು ಕಂಗಾಲು ಮಾಡಿದೆ.
ಇಂತಹ ಪರಿಸ್ಥಿತಿಯಲ್ಲಿ ಮೂಡಿಗೆರೆ ಸಮೀಪದ ಬಿದರಹಳ್ಳಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ನಮನ ಪ್ರಧಾನಿ ನರೇಂದ್ರ ಮೋದಿಯವರಿಗೆ ಇತ್ತೀಚೆಗೆ ಸುದೀರ್ಘವಾದ ಪತ್ರ ಬರೆದು ತಮ್ಮ ಹಳ್ಳಿಯ ಜನರು ಎದುರಿಸುತ್ತಿರುವ ಕಷ್ಟ-ನಷ್ಟ, ಕಾರ್ಪಣ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಳು. ವಿದ್ಯಾರ್ಥಿನಿಯ ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿಗೆ ಪತ್ರ ಬರೆದು ತಕ್ಷಣ ಈ ಬಗ್ಗೆ ವರದಿ ನೀಡುವಂತೆ ಆದೇಶಿಸಿದ್ದಾರೆ.
ಎಚ್ಚೆತ್ತುಕೊಂಡಿರುವ ಪ್ರಭಾರ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಮತ್ತು ಕಛೇರಿಯ ಅಧಿಕಾರಿಗಳು ತಕ್ಷಣವೇ ಮೂಡಿಗೆರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ಮತ್ತು ಜಾವಳಿ ಗ್ರಾಪಂ ಪಿಡಿಒ ಜೇಕುಂರನ್ನು ಕರೆಸಿ ಹಳ್ಳಿಯ ದಯನೀಯ ಪರಿಸ್ಥಿತಿಯ ಬಗ್ಗೆ ಸೋಮವಾರ ಚರ್ಚೆ ನಡೆಸಿದ್ದಾರೆ. ಈ ತನಕ ಕತ್ತಲ ಕೂಪವಾಗಿರುವ ಹಳ್ಳಿಯನ್ನು ಅಭಿವೃದ್ದಿಪಡಿಸುವ ಮಾರ್ಗೋಪಾಯಗಳ ಬಗ್ಗೆ ತಿಳಿಯಲು ಜಿಲ್ಲಾಡಳಿತ ಮತ್ತು ಮೂಡಿಗೆರೆ ತಾಲೂಕು ಆಡಳಿತದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ . ಇನ್ನಾದರೂ ಈ ಹಳ್ಳಿ ಅಧಿಕಾರಿಗಳ ಕಣ್ಣಿಗೆ ಬಿದ್ದು ಅಭಿವೃದ್ಧಿಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ಆಲೇಖಾನ್ ಹೊರಟ್ಟಿ ಎಂಬ ಪುಟ್ಟ ಹಳ್ಳಿಯನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸರಕಾರಿ ಅನುದಾನದ ಅಗತ್ಯವಿದೆ. ಇಲ್ಲಿನ ಗ್ರಾಪಂ ಸದಸ್ಯರನ್ನು ಸಂಪರ್ಕಿಸಲು ಸಾದ್ಯವಿಲ್ಲ. ಏಕೆಂದರೆ ಅಲ್ಲಿಗೆ ಮೊಬೈಲ್, ದೂರವಾಣಿ ಸಂಪರ್ಕವಿಲ್ಲ. ಒಂದು ವೇಳೆ ಯಾರನ್ನಾದರೂ ಸಂಪರ್ಕಿಸಬೇಕೆಂದರೆ ಸೋಲಾರ್ ವಿದ್ಯುತ್ ಉಳ್ಳ ಮನೆಯ ಸ್ಥಿರ ದೂರವಾಣಿಗೆ ಕರೆ ಮಾಡಬೇಕಾಗಿದೆ. -ಜೇಕುಂ, ಜಾವಳಿ, ಗ್ರಾಪಂ ಪಿಡಿಓ
ವಿದ್ಯಾರ್ಥಿನಿ ನಮನ ಪ್ರಾಧನಿಗೆ ಬರೆದ ಪತ್ರದ ಯಥಾ ನಕಲು ಪ್ರತಿ
ಗೆ,
ನರೇಂದ್ರ ಮೋದಿಜೀ
ಪ್ರಧಾನ ಮಂತ್ರಿಗಳು
ಭಾರತ ಸರ್ಕಾರ,
ಪ್ರೀತಿಯ ಪ್ರಧಾನ ಮಂತ್ರಿಗಳಿಗೆ, ನನ್ನ ಹೆಸರು ನಮನ, ನಾನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿಯ ಗೋಪಾಲಗೌಡ ಎಂಬುವರ ಮಗಳು... ನಾನು ನನ್ನ ಊರಿನಿಂದ ದಿನನಿತ್ಯ ಹೋಗಿ ಬರಲು ಸಾಧ್ಯವಿಲ್ಲದ ಕಾರಣ ಸುಮಾರು 30 ಕಿಮೀ ದೂರ ಇರುವ ಬಿದರಹಳ್ಳಿ ಎಂಬ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ... ನೀವು ದೇಶದ ಪ್ರಧಾನಿ ಆದ ಬಳಿಕ ಸ್ವಚ್ಛ ಭಾರತ್, ಗ್ರಾಮೀಣ ಅಭಿವೃದ್ಧಿ, ಭ್ರಷ್ಟಚಾರ ನಿರ್ಮೂಲನೆ ಸೇರಿದಂತೆ ಇನ್ನಿತರ ಯೋಜನೆಗಳನ್ನ ಜಾರಿಗೆ ತಂದು ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ. ದಿನಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನಿಮ್ಮ ಕೆಲಸದ ಬಗ್ಗೆ ಬಂದ ವರದಿಗಳನ್ನ ನೋಡಿ ನಾನು ತುಂಬಾ ಪ್ರಭಾವಿತಳಾಗಿದ್ದೇನೆ... ಈ ಹಿನ್ನೆಲೆಯಲ್ಲೇ ನಾನು ನನ್ನ ಊರು ಕೂಡ ಮಾದರಿ ಗ್ರಾಮ ಆಗಬಹುದಾ ಅನ್ನೋ ನಿರೀಕ್ಷೆ ಇಟ್ಟುಕೊಂಡು ಈ ಪತ್ರವನ್ನ ಬರೆಯುತ್ತಿದ್ದೇನೆ... ನನ್ನೂರು ಜಾವಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಲೇಖಾನ್ ಹೊರಟ್ಟಿ, ಚಿಕ್ಕಮಗಳೂರು ಜಿಲ್ಲೆಯ ಗಡಿಗ್ರಾಮವಾಗಿದ್ದು, ಪಶ್ಚಿಮಘಟ್ಟದ ತಪ್ಪಲು ಚಾರ್ಮಾಡಿ ಘಾಟ್ ಅನ್ನೋ ಪ್ರದೇಶದಲ್ಲಿ ಬರುತ್ತದೆ.. ಪ್ರಾಕೃತಿಕವಾಗಿ ನನ್ನೂರು ಸುಂದರವಾಗಿದೆ, ಆದರೆ ಯಾವುದೇ ಅಭಿವೃದ್ಧಿ ಕಾಣದೇ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದೆ.. ಸಾರಿಗೆ ಸಮಸ್ಯೆ ಇದ್ದು, ಕೊಟ್ಟಿಗೆಹಾರದಿಂದ ಹೊರಡುವ ಬಸ್ಗಳು ಅಲ್ಲಿ ನಿಲುಗಡೆ ಇಲ್ಲ.. ಕೊಟ್ಟಿಗೆಹಾರದಿಂದ ಆಟೋಗೆ 300ರೂ ಹೆಚ್ಚು ಕೊಟ್ಟು ನಮ್ಮ ಊರು ತಲುಪಬೇಕು.. ಹೇಗಾದ್ರೂ ಮಾಡಿ ಯಾವುದಾದ್ರೂ ವಾಹನ ಹತ್ತಿ ನಮ್ಮ ಊರಿನ ಸ್ಟಾಪ್ನಲ್ಲಿ ಇಳಿದ್ರೂ ಕೂಡ ನನ್ನ ಊರಿಗೆ ಮುಖ್ಯ ರಸ್ತೆಯಿಂದ 5 ಕೀಲೋ ಮೀಟರ್ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕು.. ಸಮರ್ಪಕವಾದ ರಸ್ತೆ ಕನಸಿನ ಮಾತಾಗಿದೆ.. ಊರಲ್ಲಿ ಪ್ರಾಥಮಿಕ ಶಾಲೆ ಇಲ್ಲ, ಹಾಗಾಗೀ ಮಕ್ಕಳು ಅನಿವಾರ್ಯವಾಗಿ ಚಿಕ್ಕವಯಸ್ಸಿನಲ್ಲೇ ಹೆತ್ತವರ ಪ್ರೀತಿಯನ್ನ ತೊರೆದು ಶಿಕ್ಷಣಕ್ಕಾಗಿ ಊರ ಬಿಡಬೇಕಾದ ಪರಿಸ್ಥಿತಿ ಇದೆ.. ನೀವು ಡಿಜಿಟಲ್ ಇಂಡಿಯಾ ಅಂತೀರಿ, ಆದ್ರೆ ನಮ್ಮ ಊರಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗೋದೇ ಇಲ್ಲ.. ಕಾಡಿನಂಚಿನಲ್ಲಿರುವ ಗ್ರಾಮ ಆಗಿರುವುದರಿಂದ ಕಾಡು ಪ್ರಾಣಿಗಳ ಭೀತಿಯಿಂದ ಜೀವನ ಸಾಗಿಸುತ್ತಿದ್ದೇವೆ.. ಯಾರಿಗಾದ್ರೂ ಆರೋಗ್ಯ ಸಮಸ್ಯೆ ಆದ್ರೆ ಅವರನ್ನ ಆಸ್ಪತ್ರೆಗೆ ಕರೆತರಲು ಹರಸಾಹಸ ಪಡಬೇಕು.. ಹೀಗೆ ಹತ್ತು ಹಲವಾರು ಸಮಸ್ಯೆಗಳ ಅಗರ ನನ್ನ ಊರಲ್ಲಿ ಇದೆ.. ದಯವಿಟ್ಟು ತಾವು ಮನಸ್ಸು ಮಾಡಿ ನನ್ನ ಊರನ್ನೂ ಕೂಡ ಮಾದರಿ ಗ್ರಾಮವಾಗಿ ಮಾಡುತ್ತೀರ ಅಂತಾ ಆಶಿಸುತ್ತೇನೆ.. ನಿಮ್ಮಿಂದ ಉತ್ತರದ ನಿರೀಕ್ಷೆಯಲ್ಲಿಯೂ ಇದ್ದೀನಿ ಸರ್......
ಇಂತಿ ನಿಮ್ಮ ಪ್ರೀತಿಯ
ನಮನ
10ನೇ ತರಗತಿ, ಮೊರಾರ್ಜಿ ದೇಸಾಯಿ ಶಾಲೆ, ಬಿದರಹಳ್ಳಿ
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.