ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ದೂರು

Update: 2016-12-20 13:56 GMT

ಬೆಂಗಳೂರು, ಡಿ. 20: 500 ರೂ.ಮತ್ತು 1ಸಾವಿರ ರೂ.ನೋಟು ರದ್ದುಗೊಳಿಸಿದ್ದು, ಜನ ಸಾಮಾನ್ಯರಿಗೆ ಲಾಭ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪೊಲೀಸ್ ಅಧಿಕಾರಿಗಳಿಗೆ ದೊಡ್ಡ ಮೊತ್ತದ ‘ಲಾಭ ತಂದುಕೊಟ್ಟ’ ಪ್ರಕರಣವೊಂದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ದಾಖಲೆಯಿಲ್ಲದ ಹಣವೆಂದು ವಶಪಡಿಸಿಕೊಂಡಿದ್ದ 72.50ಲಕ್ಷ ರೂ.ಗಳ ಪೈಕಿ 21.50ಲಕ್ಷ ರೂ.ಗಳನ್ನು ಬೆಂಗಳೂರಿನ ನಗರ ಅಪರಾಧ ವಿಭಾಗ(ಸಿಸಿಬಿ) ಎಸಿಪಿ ವೆಂಕಟೇಶ್ ಪ್ರಸನ್ನ, ಇನ್ಸ್‌ಪೆಕ್ಟರ್ ರಮೇಶ್ ರಾವ್ ಸೇರಿದಂತೆ 6 ಮಂದಿ ಪೊಲೀಸ್ ಸಿಬ್ಬಂದಿ ತಮ್ಮ ಜೇಬಿಗೆ ಇಳಿಸಿ ವಂಚಿಸಿದ್ದಾರೆಂದು ದಾವಣಗೆರೆ ಮೂಲದ ಎನ್. ಸತೀಶ್ ಮತ್ತು ಉತ್ತರಳ್ಳಿಯ ನಿವಾಸಿ ಸವಿತಾ ಎಂಬವರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರಿಗೆ ದೂರು ನೀಡಿದ್ದಾರೆ.

ಪ್ರಕರಣದ ವಿವರ:ದೂರುದಾರರಾದ ಸತೀಶ್ ಮತ್ತು ಸವಿತಾ ಅವರಿಗೆ, ಸುಹಾಸ್ ಮತ್ತು ವಿಜಯ್ ಎಂಬವರು ತಮ್ಮ ಬಳಿ ಅಮಾನ್ಯಗೊಂಡ 500 ರೂ. ಮತ್ತು 1ಸಾವಿರ ರೂ.ಗಳ 1.50 ಕೋಟಿ ರೂ.ನೋಟುಗಳಿದ್ದು, ಅವುಗಳನ್ನು ಬದಲಾಯಿಸಿ ಕೊಟ್ಟರೆ ಒಳ್ಳೆಯ ಕಮಿಷನ್ ನೀಡುವ ಆಸೆ ಹುಟ್ಟಿಸಿದ್ದಾರೆ.

ಆ ಕಾರಣ ದೂರುದಾರರು ತಮ್ಮ ಆಸ್ತಿ ಮತ್ತು ಆಭರಣಗಳನ್ನು ಅಡವಿಟ್ಟು 72.50 ಲಕ್ಷ ರೂ.ಗಳನ್ನು ನ.28ರಂದು ಕಾರೊಂದರಲ್ಲಿ ಇಲ್ಲಿನ ‘ನೈಸ್’ ರಸ್ತೆ ಸಿಗ್ನಲ್ ಬಳಿಗೆ ಬಂದಿದ್ದಾರೆ. ಈ ವೇಳೆ ಆ ಸ್ಥಳಕ್ಕೆ ಬಂದ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ 72.50 ಲಕ್ಷ ರೂ.ಹಣವಿದ್ದ ಕಾರನ್ನು ವಶಪಡಿಸಿಕೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ ಬಳಿಕ ಮಧ್ಯಾಹ್ನ 3ರಿಂದ 4:45ರ ವರೆಗೆ ನಗರದ ರಾಮಕೃಷ್ಣ ಆಶ್ರಮದ ಪಾರ್ಕಿಂಗ್ ಸ್ಥಳದಲ್ಲಿ ಕೂರಿಸಿಕೊಂಡು ನಂತರ 5ಗಂಟೆಯ ಸುಮಾರಿಗೆ ಸಿಸಿಬಿ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಅನಂತರ ರಾತ್ರಿ 8ಗಂಟೆಯ ಸುಮಾರಿಗೆ ಗಿರಿನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

10:30ರ ಸುಮಾರಿಗೆ ಐಟಿ ಅಧಿಕಾರಿಗಳು ಬಂದಾಗ ಸಿಸಿಬಿ ಪೊಲೀಸರು 51 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಪ್ಪು ಮಾಹಿತಿ ನೀಡಿದ್ದು, 21.50 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ. ಆ ಮೂಲಕ ಐಟಿ ಅಧಿಕಾರಿಗಳಿಗೆ ಪೊಲೀಸರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಎಸಿಪಿ ವೆಂಕಟೇಶ್ ಪ್ರಸನ್ನ, ಇನ್ಸ್‌ಪೆಕ್ಟರ್ ರಮೇಶ್ ರಾವ್ ಹಾಗೂ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿ ತಮಗೆ 21.50 ಲಕ್ಷ ರೂ.ವಂಚನೆ ಮಾಡಿದ್ದು, ತಮ್ಮ ಬಳಿಯಿದ್ದ ಒಟ್ಟು 72.50 ಲಕ್ಷ ರೂ.ಗಳಿಗೂ ತಾವು ಸೂಕ್ತ ದಾಖಲೆಗಳನ್ನು ಹೊಂದಿದ್ದೇವೆ.

ಆದುದರಿಂದ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ತಂಡ ವಂಚಿಸಿರುವ 21.50 ಲಕ್ಷ ರೂ. ಹಣವನ್ನು ಕೊಡಿಸಬೇಕು. ಇಷ್ಟೊಂದು ದೊಡ್ಡ ಮೊತ್ತದ ಹಣ ಕೈತಪ್ಪಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇದರಿಂದ ಮಾನಸಿಕ ತೊಂದರೆಗೆ ಸಿಲುಕಿದ್ದು ಆತ್ಮಹತ್ಯೆಯೊಂದೆ ನಮ್ಮ ಮುಂದಿರುವ ದಾರಿಯಾಗಿದೆ.

ಆದುದರಿಂದ ತಾವು ಈ ಮೊತ್ತವನ್ನು ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಮತ್ತು ಇನ್ಸ್‌ಪೆಕ್ಟರ್ ಮಹೇಶ್ ರಾವ್ ಅವರಿಂದ ಕೊಡಿಸಬೇಕು. ಜೀವ ಬೆದರಿಕೆ ಹಾಕಿರುವ ಅಧಿಕಾರಿಗಳಿಂದ ತಮಗೆ ಸೂಕ್ತ ರಕ್ಷಣೆ ನೀಡಬೇಕು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

‘ದೂರುದಾರರಿಬ್ಬರಿಗೂ ಎಸಿಪಿ ವೆಂಕಟೇಶ್ ಪ್ರಸನ್ನ ಮತ್ತು ಇನ್ಸ್‌ಪೆಕ್ಟರ್ ಮಹೇಶ್ ರಾವ್ ಅವರಿಂದ ಜೀವ ಬೆದರಿಕೆಯಿದ್ದು ರಕ್ಷಣೆ ನೀಡಬೇಕು. ಅಲ್ಲದೆ, ಅವರ 21.50 ಲಕ್ಷ ರೂ.ಹಣವನ್ನು ಕೂಡಲೇ ಹಿಂದಿರುಗಿಸಬೇಕು. ಆದರೆ, ಪೊಲೀಸರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು  ದೂರುದಾರರ ಪರ ವಕೀಲ ಹರೀಶ್ ನಾಯ್ಕ ಆರೋಪಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News