ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಗೆ ಪಟ್ಟಭದ್ರರಿಂದ ತಡೆ: ಸಿದ್ದರಾಮಯ್ಯ ವಿಷಾದ

Update: 2016-12-20 14:25 GMT

ಬೆಂಗಳೂರು, ಡಿ.20: ರಾಜ್ಯದಲ್ಲಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಾಗಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.

ನಗರದ ಕ್ರೈಸ್ಟ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಒಂಬತ್ತನೆ ವಾರ್ಷಿಕ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಭದ್ರ ಹಿತಾಸಕ್ತಿಗಳಿಗೆ ಜನತೆಯನ್ನು ಶೋಷಣೆ ಮಾಡಲು ಮೂಢನಂಬಿಕೆಗಳು ಬೇಕಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಜನತೆಯನ್ನು ವೈಜ್ಞಾನಿಕ, ವೈಚಾರಿಕ ಹಾಗೂ ಮಾನವೀಯತೆಯ ಪಥದತ್ತ ಸಾಗುವಂತೆ ಮಾಡುವುದು ಸರಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಮೂಲ ವಿಜ್ಞಾನವನ್ನು ಹೆಚ್ಚಿ ಪ್ರೋತ್ಸಾಹಿಸಿ, ಅದರಲ್ಲಿ ಸಂಶೋಧನೆ ಮಾಡುವತ್ತ ಯುವಜನತೆಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಈಗ ಡಿಜಿಟಲ್ ಇಂಡಿಯಾ ಕುರಿತು ಮಾತನಾಡುತ್ತಿದೆ. ಆದರೆ, ನಮ್ಮ ಸರಕಾರ ‘ಈ-ಆಡಳಿತ’ ಜಾರಿಗೆ ಯಶಸ್ಸಿನತ್ತ ಸಾಗುತ್ತಿದೆ. ಮುಖ್ಯವಾಗಿ ‘ಮೊಬೈಲ್ -ಒನ್’ ಯೋಜನೆಯ ಮೂಲಕ ಕೈ ಬೆರಳಿನಲ್ಲಿಯೇ ಸುಮಾರು 4 ಸಾವಿರಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನ ವ್ಯಕ್ತಪಡಿಸಿದರು.

ಕೃಷಿಗೆ ಪೂರಕವಾಗಿ ವಿಜ್ಞಾನ-ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಅತಿ ಹೆಚ್ಚು ಒಣ ಭೂಮಿಯನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ ಪ್ರತಿ ಹನಿಯನ್ನು ಗುಣಾತ್ಮಕವಾಗಿ ಬಳಸಿ, ಇಳುವರಿ ಪಡೆಯುವುದು ಹೇಗೆಂಬುದನ್ನು ಆವಿಷ್ಕರಿಸಬೇಕಾಗಿದೆ ಎಂದು ಅವರು ಆಶಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News