×
Ad

ಬಸ್ ಮುಖಾಮುಖಿ ಢಿಕ್ಕಿ

Update: 2016-12-20 23:22 IST

ಶಿವಮೊಗ್ಗ, ಡಿ.20: ಒಂದೇ ಶಾಲೆಗೆ ಸೇರಿದ ಎರಡು ಬಸ್‌ಗಳ ನಡುವೆ ಅದೇ ಶಾಲೆಯ ಮುಂಭಾಗದಲ್ಲಿಯೇ ಮುಖಾಮುಖಿ ಢಿಕ್ಕಿ ಸಂಭವಿಸಿದ ಘಟನೆ ಮಂಗಳವಾರ ಬೆಳಗ್ಗೆ ನಗರದ ಹೊರವಲಯ ಜಾವಳ್ಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ವರದಿಯಾಗಿದೆ. ಜಾವಳ್ಳಿಯಲ್ಲಿರುವ ಜ್ಞ್ಞಾನದೀಪ ವಿದ್ಯಾಸಂಸ್ಥೆಗೆ ಸೇರಿದ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಒಂದು ಬಸ್‌ನಲ್ಲಿ ಮಾತ್ರ ವಿದ್ಯಾರ್ಥಿಗಳಿದ್ದು, ಮತ್ತೊಂದು ಬಸ್‌ನಲ್ಲಿ ವಿದ್ಯಾರ್ಥಿಗಳಿರಲಿಲ್ಲ. ಘಟನೆಯಲ್ಲಿ ಸುಮಾರು ಆರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎನ್ನಲಾಗಿದೆ.


ಉಳಿದಂತೆ ಇಬ್ಬರು ಬಸ್ ಚಾಲಕರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಚಾಲಕ ಬೆಳ್ಳಿಯಪ್ಪ ಎಂಬವರಿಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೇಗಾಯ್ತು?: ಶಿವಮೊಗ್ಗ ನಗರದ ಕಡೆಯಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುತ್ತಿದ್ದ ಹಾಗೂ ವಿದ್ಯಾರ್ಥಿಗಳನ್ನು ಕರೆತರಲು ಶಿವಮೊಗ್ಗದೆಡೆಗೆ ಶಾಲೆಯಿಂದ ನಿರ್ಗಮಿಸುತ್ತಿದ್ದ ಬಸ್‌ಗಳ ನಡುವೆ ಈ ಅವಘಡ ಸಂಭವಿಸಿದೆ. ಚಾಲಕರ ಅಜಾಗರೂಕತೆ, ನಿರ್ಲಕ್ಷ್ಯದ ಚಾಲನೆಯಿಂದ ಈ ದುರಂತ ಉಂಟಾಗಿದೆ. ಒಂದು ಬಸ್‌ನಲ್ಲಿ ಸರಿಸುಮಾರು 23 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯವಾಗಿರುವುದನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರೂ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News