×
Ad

ಡಿ.23ರಂದು ಆದಿವಾಸಿ ರಕ್ಷಣಾ ಪರಿಷತ್‌ನಿಂದ ವಿವಿಧೆಡೆ ಪ್ರತಿಭಟನೆ

Update: 2016-12-20 23:57 IST

ಮಡಿಕೇರಿ, ಡಿ.20: ದಿಡ್ಡಳ್ಳಿಯಲ್ಲಿ ನಡೆದ ಗಿರಿಜನರ ಗುಡಿಸಲುಗಳ ತೆರವು ಕಾರ್ಯಾಚರಣೆಯನ್ನು ಖಂಡಿಸಿ ಮತ್ತು ನಿವೇಶನಕ್ಕಾಗಿ ಒತ್ತಾಯಿಸಿ ಡಿ.23ರಂದು ಮಡಿಕೇರಿ, ಮೈಸೂರು, ಚಾಮರಾಜನಗರ, ಪಿರಿಯಾಪಟ್ಟಣ ಹಾಗೂ ಎಚ್.ಡಿ. ಕೋಟೆಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಮಿಟ್ಟು ರಂಜಿತ್, ದಿಡ್ಡಳ್ಳಿಯಲ್ಲಿ ನಡೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದೌರ್ಜನ್ಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಪ್ರಕರಣ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
 ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣಪ್ಪಮಾತನಾಡಿ, ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಗೊಂದಲ ಸೃಷ್ಟಿಸುತ್ತಿದ್ದಾರೆ ಮತ್ತು ದಿಡ್ಡಳ್ಳಿ ಪ್ರಕರಣದಲ್ಲಿ ರಾಜಕೀಯ ಪ್ರವೇಶವಾಗುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ರಾಜು, ಕಾವೇರಿ ಹಾಗೂ ಈರಯ್ಯ ಉಪಸ್ಥಿತರಿದ್ದರು.
ಹೋರಾಟಕ್ಕೆ ಬಿಎಸ್ಪಿ ಬೆಂಬಲ
ಮಡಿಕೇರಿ, ಡಿ.20: ದಿಡ್ಡಳ್ಳಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಿರುವ ಕ್ರಮ ಅತ್ಯಂತ ಖಂಡನೀಯ ಮತ್ತು ಅಮಾನವೀಯವೆಂದು ಬಹುಜನ ಪಕ್ಷದ ಜಿಲ್ಲಾ ಘಟಕ ಅಸಮಾಧಾನ ವ್ಯಕ್ತಪಡಿಸಿದೆ.ಪತ್ರಿಕಾ ಹೇಳಿಕೆ ನೀಡಿರುವ ಬಿಎಸ್ಪಿ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರೇಮ್‌ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಇ. ಮುಹಮ್ಮದ್ ಕುಂಞಿ, ಡಿ.23ರಂದು ಆದಿವಾಸಿಗಳು ಮಡಿಕೇರಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸಿದ್ದು, ಸರಕಾರ ಹಾಗೂ ಜನಪ್ರತಿನಿಧಿಗಳು ಅಸಹಾಯಕರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಬದುಕಲು ಬಯಸುತ್ತಿರುವ ಆದಿವಾಸಿಗಳ ಬೇಡಿಕೆ ನ್ಯಾಯಯುತವಾಗಿದೆಯಾದರೂ ದಿಡ್ಡಳ್ಳಿಯಲ್ಲಿ 577 ಕುಟುಂಬಗಳ ಬದುಕುವ ಹಕ್ಕನ್ನು ಸರಕಾರ ನಿರಾಕರಿಸಿದಂತೆ ಕಂಡು ಬರುತ್ತಿದೆ. ಸರಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಯಾವುದೇ ರೀತಿಯ ಕಾನೂನಿನ ತೊಡಕನ್ನು ನಿವಾರಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಎಚ್.ಎಸ್. ಪ್ರೇಮ್ ಕುಮಾರ್ ಹಾಗೂ ಎಸ್.ಇ. ಮುಹಮ್ಮದ್ ಕುಂಞಿ, ಈ ನಿಟ್ಟಿನಲ್ಲಿ ಸರಕಾರ ಹಾಗೂ ಜನಪ್ರತಿ ನಿಧಿಗಳು ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸಿದ್ದಾರೆ. 

ಇಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ
 ಮಡಿಕೇರಿ, ಡಿ.20: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಮೀಬಾಯಿ ಡಿ.21ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರು ಡಿ.21ರಂದು ಮಧ್ಯಾಹ್ನ 12 ಗಂಟೆಗೆ ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿ ಅರಣ್ಯ ಮೀಸಲು ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಶೇ.50ರಷ್ಟು ಜಮೀನು ಪ.ಜಾ., ಪಂಗಡಕ್ಕೆ ನೀಡಲು ಒತ್ತಾಯ
ಮಡಿಕೇರಿ, ಡಿ.20: 1964ರ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ರಚಿಸಲಾದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು ಹಾಗೂ 1969ರ ನಿಯಮವನ್ನು ಅನುಷ್ಠಾನಗೊಳಿಸುವಲ್ಲಿ ಕಂದಾಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಕೆ.ಆರ್. ವಿದ್ಯಾಧರ್, ದಿಡ್ಡಳ್ಳಿಯಲ್ಲಿ ಗಿರಿಜನರನ್ನು ನಿರಾಶ್ರಿತರನ್ನಾಗಿ ಮಾಡಿರುವುದು ಸಾಮ್ರಾಜ್ಯಶಾಹಿ ಧೋರಣೆಯಾಗಿದೆಯೆಂದು ಟೀಕಿಸಿದರು. ಕಂದಾಯ ಕಾಯ್ದೆ ನಿಯಮ 5ರ ಪ್ರಕಾರ ಸಾರ್ವಜನಿಕ ಉಪಯೋಗಕ್ಕೆ ಮೀಸಲಾಗಿರುವ ಜಾಗವನ್ನು ಹೊರತು ಪಡಿಸಿ ಮಂಜೂರಾತಿಗೆ ಲಭ್ಯವಿರುವ ಪೈಸಾರಿ ಜಾಗದ ಶೇ.50ರಷ್ಟು ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳು ಕಾನೂನು ಪಾಲನೆಯನ್ನು ಸಮರ್ಪಕವಾಗಿ ಮಾಡಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೆಂದು ತಿಳಿಸಿದ ಕೆ.ಆರ್. ವಿದ್ಯಾಧರ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪಅವರ ಹಾದಿ ತಪ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು ಇಷ್ಟು ವರ್ಷಗಳು ಕಳೆದಿದ್ದರೂ ಅಕ್ರಮ-ಸಕ್ರಮ ಸಮಿತಿ ಸಭೆ ನಡೆಯದೇ ಇರುವುದಕ್ಕೆ ಅರಣ್ಯ ಹಾಗೂ ಕಂದಾಯ ಇಲಾಖೆೆ ಶಾಮೀಲಾಗಿರುವುದೇ ಕಾರಣವೆಂದು ಆರೋಪಿಸಿದರು.
 ಪ್ರಮುಖರಾದ ಕುಂಞಿ ಅಬ್ದುಲ್ಲ ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯವೇ ದಿಡ್ಡಳ್ಳಿ ಬೆಳವಣಿಗೆಗೆ ಕಾರಣವೆಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಾರಂಡ ವಿಠಲ ಹಾಗೂ ಜೋಸೆಫ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News