ನಕಲಿ ಚಿನ್ನದ ಬಿಸ್ಕತ್ ಪ್ರಕರಣ: ಸರ್ಕಲ್ ಇನ್‌ಸ್ಪೆಕ್ಟರ್ ಸಹಿತ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು
ಕೋಲಾರ, ಡಿ.21: ನಕಲಿ ಚಿನ್ನದ ಬಿಸ್ಕತ್‌ಗಳನ್ನು ಅಸಲಿ ಎಂದು ನಂಬಿಸಿ ವಂಚಿಸುತ್ತಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಮುಳಬಾಗಿಲು ಸರ್ಕಲ್ ಇನ್‌ಸ್ಪೆಕ್ಟರ್ ಸಹಿತ ನಾಲ್ವರು ಪೊಲೀಸರನ್ನು ಅಮಾನುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.
ಮುಳಬಾಗಲು ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಎನ್.ರಾಮರೆಡ್ಡಿ, ಮುಳಬಾಗಿಲು ನಗರ ಠಾಣೆ ಪಿಎಸೈ ಆರ್.ದಯಾನಂದ, ಎಎಸೈ ವೆಂಕಟಾಚಲಪತಿ ಹಾಗೂ ಪೇದೆ ಗುರುಪ್ರಸಾದ್ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ. ಇವರನ್ನು ಅಮಾನತುಗೊಳಿಸಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಅವರು ನಿನ್ನೆ ರಾತ್ರಿ ಆದೇಶ ಹೊರಡಿಸಿದ್ದಾರೆ.
ನಕಲಿ ಚಿನ್ನದ ಬಿಸ್ಕತ್ ವಂಚನಾ ಜಾಲವು ನವೆಂಬರ್ 26ರಂದು ಬೆಳಕಿಗೆ ಬಂದಿತ್ತು. ಈ ಸಂಬಂಧ ಮೂವರನ್ನು ಬಂಧಿಸಿದ್ದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಗುರುಪ್ರಸಾದ್ ಎಂಬ ಪೊಲೀಸ್ ಪೇದೆಯನ್ನು ರಕ್ಷಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಕೋಲಾರ ಡಿಸಿಬಿಗೆ ಒಪ್ಪಿಸಲಾಗಿತ್ತು.
ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ಡಿಸಿಬಿ ಸಿಪಿಐ ವೆಂಕಟಾಚಲಪತಿ ನೇತೃತ್ವದ ತಂಡ ಆರು ಮಂದಿ ಆರೋಪಿಗಳನ್ನು ಬಂಧಿಸಿದೆ. ಅಲ್ಲದೇ ಪ್ರಕರಣದಲ್ಲಿ ಗುರುಪ್ರಸಾದ್‌ನನ್ನು ರಕ್ಷಿಸುವ ಯತ್ನದಲ್ಲಿ ನಾಲ್ವರು ಪೊಲೀಸರು ಭಾಗಿಯಾಗಿರುವ ಬಗ್ಗೆ ಜಿಲ್ಲಾ ಎಸ್ಪಿಗೆ ವರದಿ ನೀಡಿತ್ತು. ಅದರನ್ವಯ ಎಸ್ಪಿ ಡಾ.ದಿವ್ಯಾ ಅವರು ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.