ದೌರ್ಜನ್ಯ ಎಸಗಿದ ಅಧಿಕಾರಿಗಳಿಗೆ ನೋಟಿಸ್: ಮಹಿಳಾ ಆಯೋಗ
ಮಡಿಕೇರಿ, ಡಿ.21: ದಿಡ್ಡಳ್ಳಿಯಲ್ಲಿ ಗುಡಿಸಲುಗಳ ತೆರವು ಕಾರ್ಯಾಚರಣೆ ಸಂದರ್ಭ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ದೌರ್ಜನ್ಯ ನಡೆಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.
ಗುಡಿಸಲುಗಳ ತೆರವು ಕಾರ್ಯಾಚರಣೆ ಹಾಗೂ ಬೆತ್ತಲೆ ಪ್ರತಿಭಟನೆ ನಡೆದು 14 ದಿನ ಕಳೆದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಬುಧವಾರ ದಿಡ್ಡಳ್ಳಿಗೆ ಭೇಟಿ ನೀಡಿ ನಿರಾಶ್ರಿತರ ಅಳಲು ಆಲಿಸಿದರು.
ಬಳಿಕ ಮಾತನಾಡಿದ ಅವರು, ಹೋರಾಟಗಾರರು ಬೆತ್ತಲೆ ಪ್ರತಿಭಟನೆ ನಡೆಸಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈ ರೀತಿಯ ಬೆಳವಣಿಗೆ ರಾಜ್ಯದಲ್ಲಿ ನಡೆಯಬಾರದಾಗಿತ್ತು ಎಂದ ಅವರು, ನಿರಾಶ್ರಿತರಾದವರಿಗೆ ಆಹಾರ, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಆದಿವಾಸಿಗಳ ಸಂಕಷ್ಟದ ಬದುಕಿನ ಬಗ್ಗೆ ಸಂಬಂಧಿಸಿದ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಡಿ.7ರಂದು ಬೆತ್ತಲೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುತ್ತಮ್ಮ, ತಮ್ಮ ಜನಾಂಗದ ಮೇಲಾಗುತ್ತಿರುವ ಅನ್ಯಾಯಗಳನ್ನು ನಾಗಲಕ್ಷ್ಮೀ ಅವರಲ್ಲಿ ಅಲವತ್ತು ಕೊಂಡರು.
ಯರವ, ಜೇನು ಕುರುಬ, ಕಾಡು ಕುರುಬ, ಪಣಿಯ, ಪಂಜರಿ ಮೂಲ ನಿವಾಸಿ ಬುಡಕಟ್ಟು ಜನರು ನಿವೇಶನ ಹಾಗೂ ವಸತಿ ಇಲ್ಲದೆ ನಿರ್ಗತಿಕರಾಗಿದ್ದೇವೆ. ಅನಾದಿಕಾ ಲದಿಂದಲೂ ವಾಸ ಮಾಡುತ್ತಿದ್ದ ದಿಡ್ಡಳ್ಳಿಯಲ್ಲಿಯೇ ಶಾಶ್ವತ ಮರು ನಿವೇಶನ ಹಾಗೂ ವಸತಿ ಕಲ್ಪಿಸಬೇಕು ಎಂದು ಮುತ್ತಮ್ಮ ಮನವಿ ಮಾಡಿದರು.
ಈ ಹಿಂದೆ ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿದ್ದೆವು. ಅಲ್ಲದೆ, ಜೀತ ಪದ್ಧತಿಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ 4 ಸಾವಿರ ಕುಟುಂಬಗಳು ಜೀತ ಪದ್ಧತಿಯ ಕಬಂಧ ಬಾಹುವಿಗೆ ಸಿಲುಕಿ ನಲುಗಿಹೋಗಿವೆ. ಇದರಿಂದಾಗಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಶೀಘ್ರ ದಿಡ್ಡಳ್ಳಿ ಭಾಗದಲ್ಲಿಯೇ ಶಾಶ್ವತ ನೆಲೆ ಕಲ್ಪಿಸಬೇಕು. ಈ ಭಾಗದಲ್ಲಿ ರಸ್ತೆ ಸಂಪರ್ಕ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ವಸತಿ ಶಾಲೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮುತ್ತಮ್ಮ ಒತ್ತಾಯಿಸಿದರು.
ಚೆನ್ನಂಗಿ, ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ, ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ದಿಡ್ಡಳ್ಳಿಯ ನಿರಾಶ್ರಿತರು ವಾಸ್ತವ್ಯ ಹೂಡಿರುವ ಆಶ್ರಮ ಶಾಲೆಯ ಸುತ್ತ ಮುತ್ತಲ ಚೆನ್ನಂಗಿ ಮತ್ತು ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿ.21ರ ಮಧ್ಯಾಹ್ನ 2ಗಂಟೆ ಯಿಂದ ಡಿ.24 ಬೆಳಗ್ಗೆ 6 ಗಂಟೆಯ ವರೆಗೆ ಕಲಂ 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿ ಸೋಜಾ ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.