ದಿಡ್ಡಳ್ಳಿ ಗುಡಿಸಲು ತೆರವು ಪ್ರಕರಣ

Update: 2016-12-21 18:09 GMT

ಬೆತ್ತಲೆ ಪ್ರತಿಭಟನೆಗೆ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ವಿಷಾದ
ಮಡಿಕೇರಿ, ಡಿ.21: ದಿಡ್ಡಳ್ಳಿಯಲ್ಲಿ ಗುಡಿಸಲುಗಳ ತೆರವು ಕಾರ್ಯಾಚರಣೆ ಸಂದರ್ಭ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ದೌರ್ಜನ್ಯ ನಡೆಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.
ಗುಡಿಸಲುಗಳ ತೆರವು ಕಾರ್ಯಾಚರಣೆ ಹಾಗೂ ಬೆತ್ತಲೆ ಪ್ರತಿಭಟನೆ ನಡೆದು 14 ದಿನ ಕಳೆದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಬುಧವಾರ ದಿಡ್ಡಳ್ಳಿಗೆ ಭೇಟಿ ನೀಡಿ ನಿರಾಶ್ರಿತರ ಅಳಲು ಆಲಿಸಿದರು.


ಬಳಿಕ ಮಾತನಾಡಿದ ಅವರು, ಹೋರಾಟಗಾರರು ಬೆತ್ತಲೆ ಪ್ರತಿಭಟನೆ ನಡೆಸಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈ ರೀತಿಯ ಬೆಳವಣಿಗೆ ರಾಜ್ಯದಲ್ಲಿ ನಡೆಯಬಾರದಾಗಿತ್ತು ಎಂದ ಅವರು, ನಿರಾಶ್ರಿತರಾದವರಿಗೆ ಆಹಾರ, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಆದಿವಾಸಿಗಳ ಸಂಕಷ್ಟದ ಬದುಕಿನ ಬಗ್ಗೆ ಸಂಬಂಧಿಸಿದ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಡಿ.7ರಂದು ಬೆತ್ತಲೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುತ್ತಮ್ಮ, ತಮ್ಮ ಜನಾಂಗದ ಮೇಲಾಗುತ್ತಿರುವ ಅನ್ಯಾಯಗಳನ್ನು ನಾಗಲಕ್ಷ್ಮೀ ಅವರಲ್ಲಿ ಅಲವತ್ತು ಕೊಂಡರು.

ಯರವ, ಜೇನು ಕುರುಬ, ಕಾಡು ಕುರುಬ, ಪಣಿಯ, ಪಂಜರಿ ಮೂಲ ನಿವಾಸಿ ಬುಡಕಟ್ಟು ಜನರು ನಿವೇಶನ ಹಾಗೂ ವಸತಿ ಇಲ್ಲದೆ ನಿರ್ಗತಿಕರಾಗಿದ್ದೇವೆ. ಅನಾದಿಕಾ ಲದಿಂದಲೂ ವಾಸ ಮಾಡುತ್ತಿದ್ದ ದಿಡ್ಡಳ್ಳಿಯಲ್ಲಿಯೇ ಶಾಶ್ವತ ಮರು ನಿವೇಶನ ಹಾಗೂ ವಸತಿ ಕಲ್ಪಿಸಬೇಕು ಎಂದು ಮುತ್ತಮ್ಮ ಮನವಿ ಮಾಡಿದರು. ಈ ಹಿಂದೆ ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿದ್ದೆವು. ಅಲ್ಲದೆ, ಜೀತ ಪದ್ಧತಿಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ 4 ಸಾವಿರ ಕುಟುಂಬಗಳು ಜೀತ ಪದ್ಧತಿಯ ಕಬಂಧ ಬಾಹುವಿಗೆ ಸಿಲುಕಿ ನಲುಗಿಹೋಗಿವೆ. ಇದರಿಂದಾಗಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಶೀಘ್ರ ದಿಡ್ಡಳ್ಳಿ ಭಾಗದಲ್ಲಿಯೇ ಶಾಶ್ವತ ನೆಲೆ ಕಲ್ಪಿಸಬೇಕು. ಈ ಭಾಗದಲ್ಲಿ ರಸ್ತೆ ಸಂಪರ್ಕ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ವಸತಿ ಶಾಲೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮುತ್ತಮ್ಮ ಒತ್ತಾಯಿಸಿದರು.


ಅಧಿಕಾರಿಗಳ ವಿರುದ್ಧ ಅಸಮಾಧಾನ
ಮಹಿಳಾ ಆಯೋಗದ ಅಧ್ಯಕ್ಷರು ಸ್ಥಳದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಾಜ ಕಲ್ಯಾಣ ಇಲಾಖೆಯ ಅಧಿಕಾ ರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿರಾಶ್ರಿತರ ಮಕ್ಕಳಿಗೆ ಬೇಕಾದ ಪೌಷ್ಟಿಕ ಆಹಾರ ಹಾಗೂ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಶೀಘ್ರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

15ನೆ ದಿನಕ್ಕೆ ಮುಂದುವರಿದ ಅಹೋರಾತ್ರಿ ಧರಣಿ
ಸಚಿವರ ಮಾತಿಗೂ ಬೆಲೆ ಕೊಡದ ಜಿಲ್ಲಾಡಳಿತ,
ಮೂಲಸೌಕರ್ಯ ಇಲ್ಲದೆ ಪರಿತಪಿಸುತ್ತಿರುವ ಆದಿವಾಸಿಗಳು
ಸಿದ್ದಾಪುರ: ಕೊಡಗು ಜಿಲ್ಲೆಯ ವೀರಾಜ ಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ದಿಡ್ಡಳ್ಳಿಯಲ್ಲಿ ನಿರಾಶ್ರಿತ ಆದಿವಾಸಿಗಳ ಅಹೋರಾತ್ರಿ ಧರಣಿ 15ನೆ ದಿನಕ್ಕೆ ಮುಂದುವರಿದಿದೆ. ಉಸ್ತುವಾರಿ ಸಚಿವ ಸೀತಾರಾಂ ಅವರ ಸೂಚನೆಗೂ ಬೆಲೆ ನೀಡದ, ಯಾವುದೇ ಸೌಲಭ್ಯಗಳನ್ನು ನೀಡದ ಜಿಲ್ಲಾಡಳಿತ, ಅಧಿಕಾರಿಗಳ ವಿರುದ್ಧ ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿಗೂ ಕುಡಿಯುವ ನೀರು, ಆಹಾರ, ಶೌಚಾಲಯ, ವಿದ್ಯುತ್ ವ್ಯವಸ್ಥೆ ಮಾಡದೆ ಸಿಸಿ ಕ್ಯಾಮರಾ ಅಳವಡಿ ಸುವ ಕಾರ್ಯದಲ್ಲಿ ಮುಂದಾಗಿ ಆದಿವಾಸಿಗಳಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆದಿವಾಸಿ ನಾಯಕಿ ಮುತ್ತಮ್ಮ ಆರೊಪಿಸಿದರು.

ಗಾಳಿ, ಚಳಿಯನ್ನು ಲೆಕ್ಕಿಸದೆ ಕಳೆದ 15 ದಿನಗಳಿಂದ ಮರದ ಕೆಳಗೆ ಪ್ರತಿಭಟನೆ ನಡೆಸುತ್ತಿರುವ ಆದಿವಾಸಿಗಳಿಗೆ ಜಿಲ್ಲಾಡಳಿತ ಯಾವುದೇ ತಾತ್ಕಾಲಿಕ ಸೌಲಭ್ಯವನ್ನು ನೀಡದೆ ಅನ್ಯಾಯ ಮಾಡುತ್ತಿದೆ. ವಿವಿಧ ಸಂಘಟನೆಗಳು ನಮ್ಮ ಹೊಟ್ಟೆಗೆ ಆಹಾರ ನೀಡುತ್ತಿರುವುದರಿಂದ ನಾವು ಬದುಕಿದ್ದೇವೆ. ಕೂಡಲೇ ನಮಗೆ ಸಿಗಬೇಕಾದ ನಿವೇಶನ ಮತ್ತು ಮೂಭೂತ ಸೌಕರ್ಯಗಳನ್ನು ಕಲ್ಪಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಮುತ್ತಮ್ಮ ತಿಳಿಸಿದ್ದಾರೆ.

ಹೊಸದುರ್ಗ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ಈಶ್ವರ ಆನಂದ ಪುರಿ ಸ್ವಾಮಿ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೆಂಗಳೂರಿನ ವಿಧಾನ ಪರಿಷತ್ ಸದಸ್ಯ ವೀರಯ್ಯ ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರ ಅಹವಾಲು ಆಲಿಸಿದರು.

ಇದೇ ವೇಳೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಅನಾರೋಗ್ಯ ಪೀಡಿತ ನಿರಾಶ್ರಿತರಿಗೆ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಯಿತು. ಎಸ್‌ಡಿಪಿಐ, ವೆಲ್ಫೇರ್ ಪಾರ್ಟಿ ಸೇರಿದಂತೆ ಇತರ ಸಂಘ ಸಂಸ್ಥೆಗಳು ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ದಿಡ್ಡಳ್ಳಿ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ
ಮಡಿಕೇರಿ: ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಅಮಾನವೀಯ ರೀತಿಯಲ್ಲಿ ಒಕ್ಕಲೆಬ್ಬಿಸಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಆಗ್ರಹಿಸಿದೆ.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜ, ದಿಡ್ಡಳ್ಳಿ ವ್ಯಾಪ್ತಿಯಲ್ಲಿರುವ ಬಂಡವಾಳಶಾಹಿಗಳ ಅಕ್ರಮ ಜಾಗ ಒತ್ತುವರಿಯನ್ನು ತೆರವುಗೊಳಿಸಬೇಕು ಮತ್ತು ನಿರಾಶ್ರಿತರಿಗೆ ನಿವೇಶನವನ್ನು ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಒತ್ತಾಯಿಸಿದರು.


 ಆದಿವಾಸಿಗಳ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದೆಂದ ಅವರು, ಅಮಾನವೀಯ ರೀತಿಯಲ್ಲಿ ಕಾರ್ಯಾಚರಣೆೆ ನಡೆಸಿ ಗುಡಿಸಲುಗಳನ್ನು ನೆಲಸಮಗೊಳಿಸಿರುವುದು ವ  
ಾನವ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಡಿ.23 ರಂದು ಮಡಿಕೇರಿಯಲ್ಲಿ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಗೆ ಸಮಿತಿಯ ಬೆಂಬಲವಿದೆಯೆಂದು ಸಂದೇಶ್ ಜೋಸೆಫ್ ಡಿಸೋಜ ತಿಳಿಸಿದರು.


 ಮಹಿಳಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಮಾತನಾಡಿ, ಘಟನೆ ನಡೆದು 13 ದಿನಗಳೇ ಕಳೆದಿದ್ದರೂ ಸ್ಥಳಕ್ಕೆ ವಿಳಂಬವಾಗಿ ಆಗಮಿಸುತ್ತಿರುವ ಜನಪ್ರತಿನಿಧಿಗಳಿಗೆ ಇಲ್ಲಿನ ವಿಚಾರವೇ ತಿಳಿದಿಲ್ಲವೆಂದು ಹೇಳಿಕೊಳ್ಳುತ್ತಿದ್ದಾರೆ. ರಾಸಲೀಲೆ ಪ್ರಕರಣಗಳ ಬಗ್ಗೆ ಶೀಘ್ರ ಎಚ್ಚೆತ್ತುಕೊಳ್ಳುವ ರಾಜಕಾರಣಿಗಳಿಗೆ ಆದಿವಾಸಿಗಳ ಸಂಕಷ್ಟದ ಬದುಕು ಗಮನಕ್ಕೆ ಬರುತ್ತಿಲ್ಲವೆ ಎಂದು ಪ್ರಶ್ನಿಸಿದರು. ಈ ಹಿಂದೆ ರಾಜ್ಯವನ್ನಾಳಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಕಣ್ಮುಚ್ಚಿ ಕುಳಿತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕಾರಣಿಗಳು ಹಿಂಡು ಹಿಂಡಾಗಿ ದಿಡ್ಡಳ್ಳಿಗೆ ಆಗಮಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
 ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಬಿ.ಸಿ.ಬೋರಯ್ಯ, ಸಂಚಾಲಕರಾದ ಪಾರ್ಮಲೆ ಎಂ. ಗಣೇಶ್, ಕಾರ್ಮಿಕ ಸಮಿತಿ ಅಧ್ಯಕ್ಷರಾದ ವಿಜಯ ಹಾಗೂ ಸಹಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು.

ಆದಿವಾಸಿ ಹಕ್ಕು ಅರ್ಜಿಗಳನ್ನು ವಿಲೇವಾರಿ ಮಾಡಲು ಒತ್ತಾಯ
ದಿಡ್ಡಳ್ಳಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲು ಸೂಚನೆ ಮಡಿಕೇರಿ: ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ವಿಳಂಬ ಧೋರಣೆ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

 ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸಂಸದರಾದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಹಕ್ಕು ಪತ್ರಗಳು ವಿಲೇವಾರಿಯಾಗದೇ ಇರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರಗಳು ಸಿಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಶಾಸಕರು ತಿಳಿಸಿದರು.
  ಈಗಾಗಲೇ ವೀರಾಜಪೇಟೆಯ ದಿಡ್ಡಳ್ಳಿ ಗಿರಿಜನ ಪ್ರದೇಶದಲ್ಲಿ ಸಂಭವಿಸಿದ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯ, ಕಂದಾಯ ಇಲಾಖೆ, ಅರಣ್ಯ ಇಲಾಖೆಯು ಸ ುನ್ವತೆಯಿಂದ ಕೆಲಸ ಮಾಡಿ ಹಾಡಿ ಜನರಿಗೆ ಮೂಲ ಸೌಕರ್ಯಗಳನ್ನು ನೀಡುವಂತೆ ಸಲಹೆ ನೀಡಿದರು. ನಿವೇಶನ ರಹಿತ ಜನರನ್ನು ಗುರುತಿಸುವ ಕಾರ್ಯವಾಗಬೇಕೆಂದು ಶಾಸಕರು ತಿಳಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗಿರಿಜನರಿಗೆ ಈಗಾಗಲೇ ಆಹಾರ, ಶೌಚಾಲಯ, ನೀರು ಮತ್ತಿತರ ಸೌಲಭ್ಯವನ್ನು ನೀಡಲಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಸ್ಥಳೀಯ ಗಿರಿಜನರನ್ನು ಬಿಟ್ಟು ಬೇರೆ ಯಾರೂ ಭಾಗಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಪೊಲೀಸ್ ಇಲಾಖೆಯವರ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

 ಈ ಸಂದರ್ಭ ಮಾತನಾಡಿದ ಸಂಸದರಾದ ಪ್ರತಾಪ್ ಸಿಂಹ ಅವರು ಡಿಡ್ಡಳ್ಳಿಯಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆದು ತಪಾಸಣೆಯನ್ನು ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಪಂ. ಅಧ್ಯಕ್ಷರಾದ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸದಸ್ಯರಾದ ಎಚ್.ವಿ.ಕುಶಾಲಪ್ಪ, ವಿಜಯ್, ಸುಮಂತ್, ಸುಭಾಷ್ ಸೋಮಯ್ಯ, ತೆಕ್ಕಡೆ ಶೋಭಾ, ದೇವರಾಜು, ಅಶೋಕ್ ಮತ್ತಿತರರು ಹಾಜರಿದ್ದರು.

ಸಿಎಂ ಆಗಮನಕ್ಕೆ ಮನವಿ
ಮಡಿಕೇರಿ: ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಬೀದಿಪಾಲು ಮಾಡಿದ ಘಟನೆಯನ್ನು ಖಂಡಿಸಿ ಹಾಗೂ ಸರಕಾರ ನಿರಾಶ್ರಿತರಿಗೆ ತಕ್ಷಣ ನಿವೇಶನ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಿ ಜಾತ್ಯತೀತ ಜನತಾದಳ ಪಕ್ಷದ ಜಿಲ್ಲಾ ಘಟಕ ನಗರದ ಗಾಂಧಿ ಮಂಟಪದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿತು.
 ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರ ನೆೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಆದಿವಾಸಿಗಳು ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕ್ರಾಂತಿ ಗೀತೆಗಳನ್ನು ಹಾಡಿದರು. ಆದಿವಾಸಿಗಳನ್ನು ಕಡೆಗಣಿಸಿದ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.


 ಈ ಸಂದರ್ಭ ಮಾತನಾಡಿದ ಸಂಕೇತ್ ಪೂವಯ್ಯ, ಅನಾದಿಕಾಲದಿಂದಲೂ ಜಿಲ್ಲೆಯ ವಿವಿಧೆಡೆ ನೆಲೆ ಕಂಡುಕೊಂಡಿರುವ ಪ್ರತಿಯೊಂದು ಗಿರಿಜನ ಕುಟುಂಬಗಳಿಗೆ ಭೂಮಿಯ ಹಕ್ಕನ್ನು ನೀಡಬೇಕು. ಆದರೆ, ಆರು ತಿಂಗಳ ಹಿಂದೆ ದಿಡಳ್ಳಿ ವ್ಯಾಪ್ತಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದವರನ್ನು ಏಕಾಏಕಿ ಬೀದಿ ಪಾಲು ಮಾಡಿದ ಹಿನ್ನೆಲೆ ಮಾನವೀಯ ನೆಲೆಗಟ್ಟಿನಡಿ ಈ ನಿರಾಶ್ರಿತ 577 ಕುಟುಂಬಗಳ ಪರವಾಗಿ ಹೋರಾಟ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು.


   ಮುಖ್ಯಮಂತ್ರಿಗಳು ದಿಡ್ಡಳ್ಳಿಗೆ ಆಗಮಿಸಿ ಗಿರಿಜನರ ಸಮಸ್ಯೆಗಳನ್ನು ಆಲಿಸಿ, ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ದಿಡ್ಡಳ್ಳಿ ನಿರಾಶ್ರಿತರ ಪರವಾದ ಪಕ್ಷದ ಹೋರಾಟ ನಿರಂತರವಾಗಿ ನಡೆಯಲಿದ್ದು, ಡಿ.23ರಂದು ಮಡಿಕೇರಿ ನಗರದಲ್ಲಿ ನಡೆಯುವ ಆದಿವಾಸಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು. ಪಕ್ಷದ ಜಿಲ್ಲಾ ವಕ್ತಾರ ಪಿ.ಎಸ್. ಭರತ್ ಕುಮಾರ್, ಮಡಿಕೆೇರಿ ತಾಲೂಕು ಅಧ್ಯಕ್ಷ ಡಾ.ಯಾಲದಾಳು ಮನೋಜ್ ಬೋಪಯ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿಎಲ್. ಮನ್ಸೂರ್ ಮತ್ತಿರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News