ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಬೇಡ

Update: 2016-12-23 11:34 GMT

ಬೆಂಗಳೂರು,ಡಿ.23 : ‘‘ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಬೇಡ’’ ಎಂದು ನಗರದ ಸೈಂಟ್ ಜರ್ಮೇನ್ ಇನ್ ಸ್ಟಿಟ್ಯೂಷನ್ ಆವರಣದಲ್ಲಿ ಡಿಸೆಂಬರ್ 22ರಂದು ಸಂಜೆ ಬೆಂಗಳೂರಿನ ಆರ್ಚ್ ಬಿಷಪ್ ಡಾ. ಬರ್ನಾರ್ಡ್ ಮೊರಾಸ್ ಅವರು ಆಯೋಜಿಸಿದ್ದ ಬೃಹತ್ ಕ್ರಿಸ್ಮಸ್ ಪೂರ್ವ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುಮಾರು 1000 ಮಂದಿ ಸೇರಿದ್ದ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ‘‘ ಅಲ್ಪಸಂಖ್ಯಾತರಿಗೆ ಕೆಲವೊಮ್ಮೆ ಅಭದ್ರತೆಯ ಭಾವನೆ ಕಾಡುತ್ತದೆ. ಆದರೆ ನಮ್ಮ ಕಾಂಗ್ರೆಸ್ ಸರಕಾರ ಎಲ್ಲಾ ಧರ್ಮಗಳ ಜನರ ಗೌರವ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿದೆಯೆಂದು ನಾನು ನಿಮಗೆ ಭರವಸೆ ನೀಡ ಬಯಸುತ್ತೇನೆ.ಮುಸ್ಲಿಮರು, ಕ್ರೈಸ್ತರು ಅಥವಾ ಹಿಂದುಗಳಾಗಿರಬಹುದು, ಅಲ್ಪಸಂಖ್ಯಾತರು ಯಾ ಬಹುಸಂಖ್ಯಾತ ವರ್ಗದವರಾಗಿರಬಹುದು. ಎಲ್ಲಾ ಸಮುದಾಯಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವೆಂದು ನಾವು ತಿಳಿಯುತ್ತೇವೆ. ಏಸು ಕ್ರಿಸ್ತ ಎಲ್ಲ ಜನರ ಕಲ್ಯಾಣಕ್ಕಾಗಿ ಜನ್ಮ ತಾಳಿದ್ದನೆಂಬುದು ಕ್ರಿಸ್ಮಸ್ ಸಂದೇಶವಾಗಿದೆ.ಧಾರ್ಮಿಕ ಸಾಮರಸ್ಯ ಮತ್ತು ಶಾಂತಿ ಸಹಬಾಳ್ವೆಯಿಂದ ಜನರು ಇರುವಂತೆ ನೋಡಿಕೊಳ್ಳುವುದು ಪ್ರತಿಯೊಂದು ಸರಕಾರದ ಕರ್ತವ್ಯ,’’ ಎಂದು ಸಿದ್ದರಾಮಯ್ಯ ಹೇಳಿದರು.

ಕ್ರೈಸ್ತ ಸಮುದಾಯ ಸಹಿತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಹಿತಾಸಕ್ತಿಗಳನ್ನು ರಕ್ಷಿಸಲು ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುವರೆಂಬ ವಿಶ್ವಾಸ ತಮಗಿದೆಯೆಂದುತಮ್ಮ ಸ್ವಾಗತ ಭಾಷಣದಲ್ಲಿ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ಹೇಳಿದರು.

‘‘ಪ್ರೀತಿ ಮತ್ತು ಸೇವಾ ಮನೋಭಾವನೆಯನ್ನು ಜನರಲ್ಲಿ ಬೆಳೆಸುವಂತೆ ಮಾಡುವುದೇ ಕ್ರಿಸ್ಮಸ್ ಹಬ್ಬದ ಸಂದೇಶವಾಗಿದೆ. ಏಸು ಕ್ರಿಸ್ತ ಯಾವುದೇ ಒಂದು ಜಾತಿ ಯಾ ಧರ್ಮದ ಜನರ ಉದ್ಧಾರಕ್ಕಾಗಿ ಹುಟ್ಟಿ ಬರಲಿಲ್ಲ, ಬದಲಾಗಿ ಎಲ್ಲಾ ಜನರ ನಡುವೆ ಪ್ರೀತಿ ಬೆಳೆಸಲು ಹಾಗೂ ಸಂತಸವನ್ನು ಹರಡಿ ಲೋಕದಿಂದ ಕತ್ತಲನ್ನು ದೂರವಾಗಿಸುವುದು ಆತನ ಉದ್ದೇಶವಾಗಿತ್ತು,’’ ಎಂದ ಆರ್ಚ್ ಬಿಷಪ್ ಮೊರಾಸ್ ‘‘ಅಲ್ಪಸಂಖ್ಯಾತರ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿ ಮತ್ತವರ ಸಚಿವ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಲು ನಾನು ಸಂತೋಷಿಸುತ್ತೇನೆ,’’ಎಂದರು. ನೆರೆದಿದ್ದವರೆಲ್ಲರಿಗೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯವನ್ನು ಅವರು ಈ ಸಂದರ್ಭದಲ್ಲಿ ಕೋರಿದರು.

ಹಿರಿಯ ಸರಕಾರಿ ಅಧಿಕಾರಿಗಳು, ರಾಜಕೀಯ ನಾಯಕರು, ವಿವಿಧ ಕ್ರೈಸ್ತ ಸಂಸ್ಥೆಗಳ ಮುಖ್ಯಸ್ಥರು ಧಾರ್ಮಿಕ ನಾಯಕರು,ಆರ್ಚ್ ಡಯೋಸೀಸನ್ ಕ್ಯೂರಿಯ ಸದಸ್ಯರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

ಆಫ್ರಿಕನ್ ಪ್ರಜೆಗಳು, ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ಯಾರಿಶ್ ಹಾಗೂ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕ್ರಿಸ್ಮಸ್ ಹಬ್ಬದ ಅಂಗವಾಗಿ ಆರ್ಚ್ ಡಯೋಸೀಸ್1000ಕ್ಕೂ ಅಧಿಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ಮಾಡಲು ಮುಂದಾಗಿದೆ. ಅಗತ್ಯವಸ್ತುಗಳು ಹಾಗೂ ಆರ್ಥಿಕ ಸಹಾಯ ನೀಡುವ ಜವಾಬ್ದಾರಿಯನ್ನು ಬೆಂಗಳೂರು ಕ್ಯಾಥೋಲಿಕ್ ಚರಿಸ್ಮಾಟಿಕ್ ರಿನಿವಲ್ ಸರ್ವಿಸಸ್ ಮತ್ತು ಸೊಸೈಟಿ ಆಫ್ ವಿನ್ಸೆಂಟ್ ಡಿ ಪೌಲ್ ಗೆ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News