ತಮಟೆ ಬಾರಿಸುವುದಿಲ್ಲ ಎಂದಿದ್ದಕ್ಕೆ ದಲಿತರಿಗೆ ಹಿಗ್ಗಾ ಮುಗ್ಗಾ ಥಳಿತ

Update: 2016-12-23 12:10 GMT

ಚಿತ್ರದುರ್ಗ , ಡಿ.23  : ಮೂರು ದಿನಗಳಿಂದ ನಡೆಯುತ್ತಿರುವ ಮಾರಮ್ಮನ ಜಾತ್ರೆಯ ಕೊನೆ ದಿನ ತಮಟೆ ಬಾರಿಸುವುದಿಲ್ಲ ಎಂದಿದ್ದಕ್ಕೆ ದಲಿತರನ್ನು ಸವರ್ಣಿಯರು  ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಚಿತ್ರದುರ್ಗ ನಗರದ ಸ್ವಾಮಿ ವಿವೇಕಾನಂದ ನಗರದಲ್ಲಿ ನಡೆದಿದೆ.

ಥಳಿತಕ್ಕೊಳಗಾದವರನ್ನು ಕೊಟ್ರಪ್ಪ, ಗಂಗಮ್ಮ, ಹರೀಶ್ ಮತ್ತು ಪ್ರೇಮಾ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ.

 ಹಲ್ಲೆ ನಡೆಸಿದವರನ್ನು ಸೋಮಾ, ಗುರು ಮೂರ್ತಿ, ಶಿವರುದ್ರಪ್ಪ ಹಾಗೂ ಓಂಕಾರಪ್ಪ ಎಂದು ಗುರುತಿಸಲಾಗಿದ್ದು , ಘಟನೆಯ ನಂತರ ಎಲ್ಲರೂ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಹುಷಾರಿಲ್ಲದ ಕಾರಣ ತಮಟೆ ಬಾರಿಸವುದಿಲ್ಲ ಎಂದು ಹೇಳಿದ್ದಕ್ಕೆ ಕಾಲಿನಿಂದ ತುಳಿದು ಚಪ್ಪಲಿ ಬೀಸಿ ಹೊಡಿದಿದ್ದಾರೆ. ಆಸ್ಪತ್ರೆಗೆ  ಹೋಗಲು ಆಟೋ ಬಳಿ ಹೋದಾಗ  “ ಹತ್ತಿಸಿದ್ರೆ ನಿಮಗೂ ಹೊಡೆಯುತ್ತೇವೆ ”  ಎಂದು ಆಟೋದವರನ್ನು ಹೆದರಿಸಿದ್ದಾರೆ . ಈ ಕಾರಣ ಆಟೋದವರೂ ನಮ್ಮನ್ನು ಹತ್ತಿಸಲಿಲ್ಲ. ನೋವಿನಲ್ಲೂ ಆಟೋ ಇಲ್ಲದ ನಡೆದುಕೊಂಡು ಬಂದು ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹಲ್ಲೆಗೊಳಗಾಗಿರುವವರ ಸಂಬಂಧಿ ಚೇತನ್ ಆರೋಪಿಸಿದ್ದಾರೆ.

ಈ ಬಗ್ಗೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News