×
Ad

ಅಕ್ರಮ-ಸಕ್ರಮ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಕಾಗೋಡು ತಿಮ್ಮಪ್ಪ

Update: 2016-12-23 19:33 IST

ಬೆಂಗಳೂರು, ಡಿ.23: ಅಕ್ರಮ-ಸಕ್ರಮ ಯೋಜನೆಯಡಿ 94 ಸಿ(ಗ್ರಾಮೀಣ ಪ್ರದೇಶ) ಹಾಗೂ 94 ಸಿಸಿ(ನಗರ ಪ್ರದೇಶ) ಅಡಿಯಲ್ಲಿ ಅರ್ಜಿ ಸಲ್ಲಿಕೆಗೆ ಮುಂದಿನ ಸಾಲಿನ ಜ.21ರವರೆಗೆ ಅರ್ಜಿ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಹಾಗೂ ಸಕ್ರಮಗೊಳಿಸಲು ನಿಗದಿ ಪಡಿಸಿದ್ದ ದಂಡದ ಪ್ರಮಾಣವನ್ನು ಶೇ.50ರಷ್ಟು ಇಳಿಸುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಗ್ರಾಮಾಂತರ ಪ್ರದೇಶದಲ್ಲಿ 50/80 ಹಾಗೂ ನಗರ ಪ್ರದೇಶದಲ್ಲಿ 30/40 ವಿಸ್ತೀರ್ಣದವರೆಗೆ ಸಕ್ರಮಗೊಳಿಸಲಾಗುವುದು. 50/80 ವಿಸ್ತೀರ್ಣದವರೆಗೆ ನಿರ್ಮಿಸಿರುವ ಮನೆಗೆ ನಿಗದಿಪಡಿಸಿದ್ದ ದಂಡದ ಮೊತ್ತವನ್ನು 6 ಸಾವಿರ ರೂ.ಗಳಿಂದ 3 ಸಾವಿರ ರೂ.ಗಳವರೆಗೆ ಹಾಗೂ 30/40 ವಿಸ್ತೀರ್ಣದ ವರೆಗಿನ ಮನೆಗೆ ನಿಗದಿಪಡಿಸಿದ್ದ 1500 ರೂ.ದಂಡವನ್ನು 600-700 ರೂ.ಗಳಿಗೆ ಇಳಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಗ್ರಾಮ ಲೆಕ್ಕಿಗ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ಗ್ರಾಮಗಳಿಗೆ ತೆರಳಿ ಬಡವರು ಯಾವ ಯಾವ ಸರ್ವೇ ನಂಬರ್‌ಗಳಲ್ಲಿ ಸರಕಾರಿ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎಂಬ ಪಟ್ಟಿಯನ್ನು ಸಿದ್ಧಪಡಿಸಬೇಕು. ಅಲ್ಲದೆ, ಅಕ್ರಮವಾಗಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಅವರಿಂದ ಅರ್ಜಿ ಪಡೆದು ಸಲ್ಲಿಸಬೇಕು ಎಂದು ಕಾಗೋಡು ತಿಮ್ಮಪ್ಪ ಸೂಚಿಸಿದರು.

ಕೇಂದ್ರಕ್ಕೆ ಮನವಿ: ನೆರೆ ಹಾವಳಿ ಹಾಗೂ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ರೈತರ ನೆರವಿಗೆ ಧಾವಿಸುವಂತೆ ಕೇಂದ್ರ ಗೃಹ ಸಚಿವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಸರಕಾರದ ಅಧಿಕಾರಿಗಳ ತಂಡವು ರಾಜ್ಯದ 15 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಮಾಹಿತಿ ಕಲೆ ಹಾಕಿ ಕೇಂದ್ರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ ಎಂದು ಅವರು ಹೇಳಿದರು.

ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಮೂವರು ಸಚಿವರನ್ನು ಒಳಗೊಂಡ ಸಮಿತಿಯು ಜನವರಿ ಮೊದಲನೆ ವಾರದಲ್ಲಿ ಸಭೆ ಸೇರಿ ನಮ್ಮ ರಾಜ್ಯದ ಪರಿಸ್ಥಿತಿ ಕುರಿತ ವರದಿಯನ್ನು ಪರಿಶೀಲನೆ ನಡೆಸಲಿದೆ. ಆನಂತರ, ನಮಗೆ ಕೇಂದ್ರದ ನೆರವು ಸಿಗಬಹುದು ಎಂದು ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬರಗಾಲದಿಂದಾಗಿ 4700 ಕೋಟಿ ರೂ.ಹಾಗೂ ನೆರೆ ಹಾವಳಿಯಿಂದ 362 ಕೋಟಿ ರೂ.ನಷ್ಟವಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿಗಳ ಅನ್ವಯವೆ ನಾವು ನೆರವು ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಸುಮಾರು 2-3 ಸಾವಿರ ಕೋಟಿ ರೂ.ಗಳಷ್ಟು ನೆರವು ಸಿಗಬಹುದು ಎಂಬ ಆಶಾಭಾವನೆಯಿದೆ ಎಂದು ಅವರು ಹೇಳಿದರು.

ಈ ಮಾಸಾಂತ್ಯಕ್ಕೆ ಬರಗಾಲ ನಿರ್ವಹಣೆಗೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿಯು ಸಭೆ ಸೇರಲಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದು ಸಚಿವ ಸಂಪುಟ ಉಪ ಸಮಿತಿಗಳನ್ನು ರಚಿಸಿ, ಬರ ಪರಿಹಾರ ಕ್ರಮಗಳ ಕುರಿತು ಅಧ್ಯಯನ ನಡೆಸುವಂತೆ ರಚಿಸಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ಸರಬರಾಜು ಹಾಗೂ ಗೋಶಾಲೆಗಳ ಸ್ಥಾಪನೆ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ 60 ಲಕ್ಷ ರೂ.ಗಳನ್ನು ಒದಗಿಸಲಾಗಿದೆ. ಅಲ್ಲದೆ, ಗ್ರಾಮೀಣಾಭಿವೃದ್ಧಿ ಇಲಾಖೆಯು ಕುಡಿಯುವ ನೀರು ಪೂರೈಕೆಗೆ ನೆರವು ನೀಡಲಿದೆ. ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ 6-7 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳು ಎಲ್ಲ ತಾಲೂಕುಗಳಿಗೆ ಮೇಲ್ವಿಚಾರಕ ಅಧಿಕಾರಿಗಳನ್ನು ನೇಮಕ ಮಾಡಿ, ಅವರ ಮೂಲಕ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಕೇಂದ್ರ ಸರಕಾರದಿಂದ ನೆರವು ಸಿಕ್ಕಿದ 15 ದಿನಗಳಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರ ಬ್ಯಾಂಕು ಖಾತೆಗಳಿಗೆ ನೇರವಾಗಿ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ರೈತರಿಗೆ ಬೆಳೆ ಪರಿಹಾರ ನೀಡುವ ಕುರಿತು ರಾಜ್ಯ ಸರಕಾರ ಯಾವುದೆ ತೀರ್ಮಾನ ಕೈಗೊಂಡಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರಿನ ಪರಿಸ್ಥಿತಿ ಜನವರಿ, ಫೆಬ್ರವರಿ ನಂತರ ಬಿಗಡಾಯಿಸಬಹುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News