ಬರ; ಬಿಜೆಪಿ ನಾಯಕರು ಪ್ರವಾಸದ ಬದಲು ಹೆಚ್ಚಿನ ಅನುದಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲಿ: ಸಿದ್ದರಾಮಯ್ಯ
ಮೈಸೂರು, ಡಿ.24: ರಾಜ್ಯದ ಬಿಜೆಪಿ ನಾಯಕರು ಬರಪೀಡಿತ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳುವ ಬದಲು ಹೆಚ್ಚಿನ ಅನುದಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಪ್ರವಾಸ ಕೈಗೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಬರಪೀಡಿತ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಚಿವರ ನಾಲ್ಕು ತಂಡ ರಚನೆಯಾಗಿದೆ. ತಂಡಗಳು ತಮಗೆ ನಿಗಧಿ ಮಾಡಿರುವ ಜಿಲ್ಲೆಗಳಲ್ಲಿ ಸಂಚರಿಸುತ್ತಿವೆ ಎಂದರು.
ಬರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ಕೋರಿ ಕೇಂದ್ರಕ್ಕೆ ಪತ್ರ ಬರೆದು ಎರಡು ತಿಂಗಳಾಗಿದೆ. ಆದರೆ ಈವರೆಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರದಿಂದ ನೆರವು ಕೊಡಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಲಿ ಎಂದು ಹೇಳಿದರು.
ಕನ್ನಡದಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ವಿಡಿಯೋ ಕಾನ್ಫರೆನ್ಸ್ ವೇಳೆಯೂ ಈ ವಿಷಯ ತಿಳಿಸಲಾಗಿತ್ತು ಎಂದರು.
ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೆ ತಾನೆ ಅವರು ಸಾಲ ಮನ್ನಾ ಮಾಡುವುದು. ಅಧಿಕಾರವಿಲ್ಲದೆ ಸಾಲ ಮನ್ನಾ ಮಾಡಲು ಹೇಗೆ ಸಾಧ್ಯ ಎಂದು ಸಿಎಂ ಪ್ರಶ್ನಿಸಿದರು.