×
Ad

ಸತತ 17 ದಿನಗಳ ನಿರಂತರ ಹೋರಾಟದ ಬಳಿಕ ವಿಶ್ರಾಂತಿ ಪಡೆದ ಆದಿವಾಸಿಗಳು

Update: 2016-12-24 17:33 IST

ಸಿದ್ದಾಪುರ, ಡಿ.24: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀದ ದಿಡ್ಡಳ್ಳಿಯಲ್ಲಿ ನಿರಾಶ್ರಿತರಾಗಿದ್ದ ಆದಿವಾಸಿಗಳು ಸತತ 17 ದಿನಗಳ ಕಾಲ ಆಹೋರಾತ್ರಿ ಪ್ರತಿಭಟನೆ ಬಳಿಕ ಡಿ.23 ರಂದು ಮಡಿಕೇರಿ ಚಲೋ ಸಮಾವೇಶ ನಡೆಸಿದ ಪರಿಣಾಮ ರಾಜ್ಯ ಸರಕಾರ ಆದಿವಾಸಿಗಳ ಬೇಡಿಕೆಗೆ ಸ್ಪಂದಿಸಿದೆ. ಇದರಿಂದ ಪ್ರತಿಭಟನೆಯನ್ನು ಕೈ ಬಿಡಲಾಗಿದ್ದು, ಇದೀಗ ತಮಗೆ ವಸತಿ ಸಿಗಲಿದೆ ಎಂಬ ಬಲವಾದ ವಿಶ್ವಾಸ ಆದಿವಾಸಿಗಳಲ್ಲಿ ಮೂಡಿದ್ದು, ದಿಡ್ಡಳ್ಳಿ ಹೋರಾಟಕ್ಕೆ ಮೊದಲ ಜಯ ದೊರೆತಂದಾಗಿದೆ.

 ಕಳೆದ ಡಿ. 7ರ ಬೆಳಗ್ಗಿನ ಜಾವ 4 ಗಂಟೆಗೆ ಜಿಲ್ಲಾಡಳಿತ ಯಾವುದೇ ಮುನ್ಸೂಚನೆ ನೀಡದೆ ಅರಣ್ಯ ಇಲಾಖೆ ಪೊಲೀಸರೊಂದಿಗೆ ಸೇರಿ ಜೆಸಿಬಿಯ ಮೂಲಕ ಆದಿವಾಸಿಗಳ 577 ಗುಡಿಸಲುಗಳನ್ನು ತೆರವುಗೊಳಿಸಿದ್ದರು. ಈ ಸಂದರ್ಭ ಅಸಾಹಾಯಕರಾಗಿದ್ದ ಆದಿವಾಸಿಗಳಲ್ಲಿ ಕೆಲವರು ಬೆತ್ತಲೆ ಪ್ರತಿಭಟನೆ ನಡೆಸಿದ್ದರು. ತಕ್ಷಣ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಅಮಾನವೀಯವಾಗಿ ಬಂಧಿಸಿದರು. ಇತರರ ಮೇಲೆ ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದರು. ದಿಕ್ಕು ದೋಚದ ಆದಿವಾಸಿಗಳು ಸ್ಥಳದಿಂದ ಓಡಿದರು. 
     
  ಆದಿವಾಸಿಗಳ ಕಣ್ಣೀರಿಗೂ ಸ್ಪಂದಿಸದ ಇಲಾಖೆ ಅವರನ್ನು ಬೀದಿ ಪಾಲು ಮಾಡಿದರು. ನಂತರ ಮಾಧ್ಯಮಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆದಿವಾಸಿಗಳು ಒಬ್ಬೊಬ್ಬರಾಗಿ ಜಮಾಯಿಸಿ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಮುಂದೇನು ಎಂಬ ಚಿಂತೆಯಲ್ಲಿ ಜೆಸಿಬಿ ಯಂತ್ರಕ್ಕೆ ಸಿಲುಕಿ ನಜ್ಜುಗುಜ್ಜಾದ ಕೆಲವು ಸಾಮಗ್ರಿಗಳೊಂದಿಗೆ ಗಂಟು ಮೂಟೆ ಕಟ್ಟಿ ರಸ್ತೆಯಲ್ಲೇ ಕುಳಿತರು.

ನಂತರ ಬಂದ ಆದಿವಾಸಿ ಮುಖಂಡರುಗಳು ತಾತ್ಕಾಲಿಕವಾಗಿ ಆಶ್ರಮ ಶಾಲೆಯ ಮೈದಾನದಲ್ಲಿ ಇರಿಸಿದರು. ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಮರದ ಬುಡ ಕೆಳಗೆ ವಯೋ ವೃದ್ಧರು, ಪುಟಾಣಿ ಮಕ್ಕಳೊಂದಿಗೆ ಹಗಲು ರಾತ್ರಿ ದಿನ ಕಳೆದರು. ತಿನ್ನಲು ಆಹಾರ ಇಲ್ಲದೆ ಮಲಗಲು ಪ್ಲಾಸ್ಟಿಕ್ ವ್ಯವಸ್ಥೆಯೂ ಇಲ್ಲದೆ ಸಂಕಷ್ಟದ ಜೀವನ ನಡೆಸಿ, ಮೂರು ದಿನಗಳ ನಂತರ ಬಂದ ಜನಪ್ರತಿನಿಧಿಗಳು ಆಹಾರ ಪದಾರ್ಥಗಳನ್ನು ನೀಡಿ ಭರವಸೆ ಮಾತುಗಳನ್ನಾಡಿ ತೆರಳಿದವರು ಮತ್ತೆ ಇತ್ತ ಕಡೆ ತಿರುಗಿಯೂ ನೋಡಲಿಲ್ಲ.

ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಸುದ್ದಿ ವಾಹಿನಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಜನಪ್ರತಿನಿಧಿಗಳ ದಂಡೇ ಹರಿದು ಬಂತು. ಪ್ರಚಾರಕ್ಕಾಗಿ ಬಂದವರು ಶಾಶ್ವತ ಸೂರು ನೀಡುವ ವ್ಯವಸ್ಥೆಗೆ ಮುಂದಾಗಲಿಲ್ಲ. ಮಾಜಿ ಜಿ.ಪಂ ಅಧ್ಯಕ್ಷ ರಾಜಾರಾವ್, ಮುಸ್ಲಿಂ ಸಮಾಜ ಬಾಂಧವರು ಹಸಿದ ಹೊಟ್ಟೆಗೆ ಅನ್ನ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಆದಿವಾಸಿಗಳ ನರಕಯಾತನೆಯನ್ನು ಕಂಡ ಎ.ಕೆ ಸುಬ್ಬಯ್ಯ , ಆದಿವಾಸಿಗಳು ಅನಾದಿ ಕಾಲದಿಂದಲೂ ಕಾಡನ್ನು ರಕ್ಷಣೆ ಮಾಡುತ್ತಾ ಬದುಕಿ ಬಂದವರು ಜೀತ ಪದ್ಧತಿಯಿಂದ ಮುಕ್ತಿ ಕಾಣಲು ನೆಲೆಸಿರುವ ನಿಮಗೆ ಸರಕಾರ ಸೂರು ಕಲ್ಪಸಬೇಕಾಗಿದೆ. ನಿಮ್ಮ ಹೋರಾಟಕ್ಕೆ ನಾವಿರುತ್ತೇವೆ ಎಂದು ಹೇಳಿದರಲ್ಲದೆ ರಾಜ್ಯ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳಿಗೆ ದೂರವಾಣಿ ಮೂಲಕ ಆದಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ತಿಳಿಸಿ ತಕ್ಷಣ ಸ್ಪಂಧಿಸಬೇಕೆಂದು ಮಾಹಿತಿ ನೀಡಿದರು.

ಸಮಿತಿಯ ಪ್ರಮುಖರಾದ ನಿರ್ವಾಹಣಪ್ಪ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಶ್ರೀನಿವಾಸ್ ಕಂದೇಗಾಲ, ಮಲ್ಲಿಗೆ, ವಸಂತ್, ಕಾವೇರಿ ಸೇರಿದಂತೆ ಮತ್ತಿತರರ ತಂಡ ಹಾಡಿಗೆ ಭೇಟಿ ನೀಡಿದರು.

ದಿಕ್ಕು ತೋಚದಂತಾಗಿದ್ದ ಆದಿವಾಸಿಗಳಿಗೆ ಹೋರಾಟ ಸಮಿತಿಯ ಸಹಕಾರ ಅಗತ್ಯವಾಗಿತ್ತು. ಇದರ ಬೆನ್ನಲೇ ನಟ ಚೇತನ್ ಹೋರಾಟಕ್ಕೆ ಬೆಂಬಲ ಸೂಚಿಸಿ ದಿಡ್ಡಳ್ಳಿಯಲ್ಲಿ ವಾಸ್ತವ್ಯ ಹೂಡಿದರು. ಇದರೊಂದಿಗೆ ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಕಾರ್ಯಕರ್ತರ ತಂಡ ಆಗಮಿಸಿ ಆದಿವಾಸಿಗಳ ಅತಂತ್ರ ಬದುಕಿನ ಸ್ಥಿತಿಯನ್ನು ಕಂಡು ಅವರೊಂದಿಗೆ ಆಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಈ ಎಲ್ಲಾ ಘಟನೆಗಳು ನಡೆದು 10 ದಿನಗಳ ನಂತರ ಜಿಲ್ಲೆಯ ಮಡಿಕೇರಿಗೆ ಆಗಮಿಸಿದ 5 ಸಚಿವರ ತಂಡವೊಂದು ನಿರಾಶ್ರಿತ ಪ್ರತಿಭಟನಾಗಾರರ ಸ್ಥಳಕ್ಕೆ ಭೇಟಿ ನೀಡದೆ ಹಿಂತಿರುಗಿದ್ದು ಪ್ರತಿಭಟನಾಗಾರರ ಆಕ್ರೋಷಕ್ಕೆ ಕಾರಣವಾಯಿತು.
 

 ಕಾಫಿ ತೋಟಗಳ ಲೈನ್ ಮನೆಯ ಜೀತ ಪದ್ಧತಿಯಿಂದ ಹೊರ ಬಂದು ಅರಣ್ಯದಂಚಿನಲ್ಲಿ 6 ತಿಂಗಳ ಹಿಂದೆ ಜೇನುಕುರುಬರು, ಎರವರು, ಸೋಲಿಗ ಸೇರಿದಂತೆ ಆದಿವಾಸಿಗಳು ಗುಡಿಸಲುಗಳನ್ನು ನಿರ್ಮಿಸಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಸೂರ್ಯಸೆನ್ ಮತ್ತು ಡಿಎಫ್‌ಓ ಗೋಪಾಲ್ ನಮ್ಮಿಂದ ವಾರಕ್ಕೆ ಹಾಗೂ ತಿಂಗಳಿಗಂತೆ ಇದುವರೆಗೆ 6ಲಕ್ಷದ 80ಸಾವಿರ ಹಣ ಪಡೆದಿರುವುದಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದ ಜನಪ್ರತಿನಿಧಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು.

ಹೋರಾಟದ ಹಾದಿ:
       

 ಡಿ. 16ರಂದು ಜಿಲ್ಲೆಗೆ ಭೇಟಿ ನೀಡಿದ ಸಚಿವ ಕಾಗೋಡು ತಿಮ್ಮಪ್ಪ ಆದಿವಾಸಿಗಳಿಗೆ ಅದೇ ಜಾಗದಲ್ಲಿ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಸಚಿವರು ಜಿಲ್ಲೆಯಿಂದ ತೆರಳಿದ ನಂತರ ಮಾಧ್ಯಮಗಳ ಮೂಲಕ ಗುಡಿಸಲು ತೆರವುಗೊಳಿಸಿದ ಜಾಗದ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸೌಜನ್ಯಕ್ಕಾದರು ಜಿಲ್ಲಾಧಿಕಾರಿಗಳು ನಿರಾಶ್ರಿತೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಡಿ. 18 ರಂದು ದಿಡ್ಡಳ್ಳಿಗೆ ಆಗಮಿಸಿದ ಅಧಿಕಾರಿಗಳನ್ನು ಆದಿವಾಸಿಗಳು ತರಾಟೆಗೆ ತೆಗೆದುಕೊಂಡರು. ಐಟಿಡಿಪಿ ಅಧಿಕಾರಿ ಮಾಯಾದೇವಿ ಗಲಗಲಿ ಮಾನವೀಯತೆ ಇಲ್ಲದೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

      
ಡಿ. 19 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್ ಸೀತಾರಾಂ ಭೇಟಿ ನೀಡಿ ಮೂರು ತಿಂಗಳಿನಲ್ಲಿ ನಿವೇಶನ ನೀಡುವ ಭರವಸೆ ನೀಡುವುದರೊಂದಿಗೆ ಕೂಡಲೆ ಮೂಲಭೂತ ಸೌಲಭ್ಯ ಕಲ್ಪಸಲು ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಅಧಿಕಾರಿಗಳು ಯಾವುದೇ ಸೌಲಭ್ಯ ಒದಗಿಸಲಿಲ್ಲ.

ಡಿ. 20 ರಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನಾಗಾರರು ಧಿಕ್ಕಾರ ಕೂಗಿದರು. ಈ ಸಂದರ್ಭ ಬಿಜೆಪಿ ಮುಖಂಡರ ಹಾಗೂ ಪ್ರತಿಭಟನಾಗಾರರ ನಡುವೆ ವಾಗ್ವಾದ ನಡೆಯಿತು. ನಿಮ್ಮ ಹೋರಾಟಕ್ಕೆ ಬಿಜೆಪಿ ಬೆಂಬಲ ಇದೆ. ಕೂಡಲೆ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆ ಹರಿಸಬೇಕೆಂದು ಯಡಿಯೂರಪ್ಪ ಆಗ್ರಹಿಸಿದರು.

ಡಿ. 21 ರಂದು ಮಡಿಕೇರಿಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಹೊರಗಿನಿಂದ ಬಂದವರಿಂದ ದಿಡ್ಡಳ್ಳಿಯಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿದ್ದು, ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ಆದಿವಾಸಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ನಿಷೇಧಿತ ಎಸ್‌ಡಿಪಿಐ ಸಂಘಟನೆಯವರು ಆಹಾರ ಸಾಮಗ್ರಿಗಳನ್ನು ನೀಡಿ ಆದಿವಾಸಿಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ. ಕೂಡಲೆ ಅವರನ್ನು ದಿಡ್ಡಳ್ಳಿಯಿಂದ ಹೊರ ಹಾಕಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಕೆಲ ಸಮಯಗಳ ನಂತರ ಜಿಲ್ಲಾಧಿಕಾರಿ ಡಾ. ಆರ್.ವಿ ಡಿಸೋಜ ಡಿ. 21 ರಿಂದ 24ರ ವರೆಗೆ ದಿಡ್ಡಳ್ಳಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸ್ಥಳೀಯರಲ್ಲದವರಿಗೆ ನಿರ್ಬಂಧ ವಿಧಿಸುವ ಆದೇಶ ಹೊರಡಿಸಿದರು.

 ಡಿ. 22ರಂದು ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಎ.ಕೆ ಸುಬ್ಬಯ್ಯ ನೇತೃತ್ವದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿ, ಸಂಘಪರಿವಾರದ ಏಜೆಂಟರಂತೆ ವರ್ತಿಸುತ್ತಿರುವ ಜಿಲ್ಲಾಧಿಕಾರಿಯ ವಿರುದ್ಧ ಆಕ್ರೋಷ ವ್ಯಕ್ತ ಪಡಿಸಿದರು.

 ಡಿ. 23ರಂದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಮತ್ತು ಶಾಸನ ಸಮಿತಿ ತಂಡ ದಿಡ್ಡಳ್ಳಿಗೆ ಭೇಟಿ ನೀಡಿ ಆದಿವಾಸಿಗಳ ಸಮಸ್ಯೆಯನ್ನು ಆಲಿಸಿದರು. ಸ್ಥಳದಲ್ಲಿದ್ದ ಎ.ಕೆ ಸುಬ್ಬಯ್ಯ ಆದಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಲು ಮುಂದಾಗುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಸಚಿವರು ಮಡಿಕೇರಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿ ತೆರಳಿದರು.

 ಮಡಿಕೇರಿಯ ಜಿ.ಪಂ ಸಿಇಒ ಕಚೇರಿಯಲ್ಲಿ ಸಚಿವ ಆಂಜನೇಯ, ಆದಿವಾಸಿಗಳ ಹೋರಾಟಗಾರರು, ವಿಧಾನಸಭೆ ಸಚಿವಾಲಯ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಯಲ್ಲಿ ನಿರಾಶ್ರಿತರಾಗಿರುವವರಿಗೆ ಕಾನೂನಿನಡಿಯಲ್ಲಿ ನಿವೇಶನವನ್ನು ನೀಡಿ ಮನೆ ಕಟ್ಟಿಕೊಡಲು ಸರಕಾರ ಬದ್ಧವಾಗಿದೆ. ಒಂದು ತಿಂಗಳವರೆಗೆ ಆದಿವಾಸಿಗಳು ಈಗಿರುವ ಜಾಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸರಕಾರಿ ಭೂಮಿಯನ್ನು ಗುರುತಿಸಿ ಒಂದು ತಿಂಗಳ ಒಳಗೆ ನಿವೇಶನ ರಹಿತರಿಗೆ ನೀಡಲಾಗುವುದು. ಜಾಗದ ಸಮಸ್ಯೆ ಉಂಟಾದಲ್ಲಿ ಖಾಸಗಿ ಕಾಫಿ ತೋಟದ ಮಾಲಕರಿಂದ ಖರೀದಿಸಿ ಆದಿವಾಸಿಗಳ ಬಡಾವಣೆ ನಿರ್ಮಾಣ ಮಾಡುವುದಾಗಿ ಸಚಿವರು ತಿಳಿಸಿ,  ಅದುವರೆಗೆ ಹಾಡಿಯಲ್ಲಿರುವ ನಿರಾಶ್ರಿತರಿಗೆ ಮೂಲ ಸೌಲಭ್ಯಗಳಿಗಾಗಿ ಒಂದು ಕೋಟಿ ರೂಗಳ ಚೆಕ್ಕನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭ ಸಚಿವರಿಗೆ ದಿಟ್ಟಳ್ಳಿಯಲ್ಲಿ ಆದಿವಾಸಿಗಳನ್ನು ತೆರವುಗೊಳಿಸಿರುವ ಜಾಗ ಪೈಸಾರಿಯಾಗಿದೆ ಇದನ್ನು ಸಾಬೀತು ಮಾಡುವುದಾಗಿ ಹಿರಿಯ ವಕೀಲ ಎ.ಕೆ ಸುಬ್ಬಯ್ಯ ತಿಳಿಸಿದರು. ಅರಣ್ಯ ಹಾಗೂ ಪೈಸಾರಿ ಜಾಗವನ್ನು ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ನೂರಾರು ಜನಪರ ಸಂಘಟನೆಗಳ ಬೆಂಬಲದೊಂದಿಗೆ ಮಡಿಕೇರಿ ಚಲೋ ಸಮಾವೇಶ ಗಾಂದಿ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು. ಆದಿವಾಸಿ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟಿನ ಹೋರಾಟದಿಂದಾಗಿ ದಿಡ್ಡಳ್ಳಿ ಆದಿವಾಸಿಗಳ ಶಾಶ್ವತ ಪರಿಹಾರಕ್ಕೆ ನ್ಯಾಯ ಸಿಕ್ಕಿದಂತಾಗಿದೆ ಎಂದು ಪ್ರಮುಖರು ಅಭಿಪ್ರಾಯ ಪಟ್ಟರು.


 

  

Writer - ಮುಸ್ತಫ ಸಿದ್ದಾಪುರ

contributor

Editor - ಮುಸ್ತಫ ಸಿದ್ದಾಪುರ

contributor

Similar News