ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆಯ ಸಿದ್ಧತಾ ಸಭೆ
ತೀರ್ಥಹಳ್ಳಿ, ಡಿ.24: ತೀರ್ಥ ಹಳ್ಳಿಯ ಪ್ರತಿಷ್ಠಿತ ಶ್ರೀ ರಾಮೇಶ್ವರ ದೇವಾಲಯದ ಎಳ್ಳಮಾವಾಸ್ಯೆ ಜಾತ್ರೆಯು ಡಿ.29ರಿಂದ ಆರಂಭ ಗೊಳ್ಳಲಿದ್ದು, ಈ ಸಂಬಂಧ ಪಟ್ಟಣ ಪಂಚಾಯತ್ ವತಿಯಿಂದ ಜಾತ್ರೆಯ ಸಿದ್ಧತಾ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಬ್ ಇನ್ ಸ್ಪೆಕ್ಟರ್ ಭರತ್‌ಕುಮಾರ್, ಈ ಬಾರಿ ಜಾತ್ರೆ ನಡೆಯುವ ರಥಬೀದಿ ಮತ್ತು ಪಟ್ಟಣದ ವಿವಿಧ ಭಾಗಗಳಲ್ಲಿ ನೂರಕ್ಕೂ ಹೆಚ್ಚು ಸಿ.ಸಿ. ಕ್ಯಾಮರಾ ಅಳವಡಿಸಿ ಪ್ರತಿ ಚಲನವಲನದ ಮೇಲೆ ಕಣ್ಗಾವಲು ಇಡಲು ತೀರ್ಮಾನಿಸಲಾಗಿದೆ. ಕಳ್ಳತನ, ದುರ್ವರ್ತನೆ, ಅಹಿತರಕ ಘಟನೆಗೆ ಆಸ್ಪದವಾಗದ ರೀತಿಯಲ್ಲಿ ಸಿ.ಸಿ. ಕ್ಯಾಮರಾವನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದ್ದು, ಜಾತ್ರೆಗೆ ಬರುವ ಪುಟಾಣಿ ಮಕ್ಕಳ ಸುರಕ್ಷತೆಗೆ ಸ್ವಯಂ ಸೇವಾ ಸಂಘಗಳ ನೆರವಿನೊಂದಿಗೆ ಜಾತ್ರೆಗೆ ಬರುವ ಮಕ್ಕಳಿಗೆ ಪ್ರವೇಶ ದ್ವಾರದಲ್ಲಿ ಸುರಕ್ಷತಾ ಬ್ಯಾಂಡ್ ಕಟ್ಟುವ ಹೊಸ ಯೋಜನೆಯನ್ನು ಮಾಡಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ್ ತಿಳಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಸಂದೇಶ್ ಜವಳಿ ಮಾತನಾಡಿ, ಜಾತ್ರೆ ಪ್ರದೇಶದಲ್ಲಿ ಈ ಬಾರಿ 7 ಮೊಬೈಲ್ ಟಾಯ್ಲೆಟ್‌ಗಳನ್ನು ಅಳವಡಿಸಲಾಗುವುದು. ಜಾತ್ರೆಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಬಯಲಲ್ಲಿ ಶೌಚ ಮಾಡಿ ಪರಿಸರವನ್ನು ಹಾನಿಗೊಳಿಸಬಾರದು. ಪುರ ಪಂಚಾಯತ್ ಈ ಬಾರಿ ಜಾತ್ರೆ ಪ್ರದೇಶದಲ್ಲಿ ಗಲೀಜು ಮಾಡಿದವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದರು. ಈ ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಲಕ್ಷ್ಮೀದೇವಿ, ಅಧಿಕಾರಿ ನಟರಾಜ್, ಪಪಂ ಸದಸ್ಯರು ಉಪಸ್ಥಿತರಿದ್ದರು.