ಶಿವಮೊಗ್ಗ ಸರಕಾರಿ ಸಿಟಿ ಬಸ್ ಡಿಪೋ ಜಾಗ ವಿವಾದ
ಕಾಗೋಡು ತಿಮ್ಮಪ್ಪರಿಂದ ನ್ಯಾಯ ಸಿಗುವ ವಿಶ್ವಾಸ
ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಹೇಳಿಕೆ
ಶಿವಮೊಗ್ಗ, ಡಿ. 24: ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣಕ್ಕೆ ಮೀಸಲಿರಿಸಲಾಗಿರುವ ಜಾಗ ರದ್ದುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪರ ಕ್ರಮ ಜನ ವಿರೋಧಿಯಾಗಿದೆ ಎಂದು ದೂರಿರುವ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಸಂಸದರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಬಿ.ಎಸ್.ಯಡಿಯೂರಪ್ಪರ ಈ ವರ್ತನೆ ಗಮನಿಸಿದರೆ ಅವರು ಖಾಸಗಿ ಸಿಟಿ ಬಸ್ ಮಾಲಕರ ಪರವಾಗಿ ಲಾಬಿ ನಡೆಸುತ್ತಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಲಕ್ಷಾಂತರ ನಾಗರಿಕರಿಗೆ ಅನುಕೂಲವಾಗುವ ಸರಕಾರಿ ಸಿಟಿ ಬಸ್‌ಗಳ ಸಂಚಾರದ ಬಗ್ಗೆ ಅವರಿಗೆ ಆಸಕ್ತಿಯಿಲ್ಲವಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರ ಮೇಲೆ ಭರವಸೆಯಿದೆ. ಯಾವುದೇ ಕಾರಣಕ್ಕೂ ಅವರು ಡಿಪೋ ನಿರ್ಮಾಣಕ್ಕೆ ಪ್ರಸ್ತುತ ಮೀಸಲಿಟ್ಟಿರುವ ಜಾಗ ಬದಲಿ ಸಬಾರದು. ಸರಕಾರಿ ಸಿಟಿ ಬಸ್‌ಗಳ ಬಲವಧರ್ನೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸೂಚಿಸಲಿ: ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಕಲ್ಲೂರು ಮೇಘರಾಜ್ ಮಾತನಾಡಿದರು.
ಜೆನ್‌ನರ್ಮ್ ಯೋಜನೆಯಡಿ ಶಿವಮೊಗ್ಗ ನಗರಕ್ಕೆ 65 ಸರಕಾರಿ ಸಿಟಿ ಬಸ್‌ಗಳು ಮಂಜೂರಾಗಿವೆ. ಪ್ರತ್ಯೇಕ ಡಿಪೋ ಮತ್ತು ವರ್ಕ್‌ಶಾಪ್ ನಿರ್ಮಿಸಲು ಸಂತೆಕಡೂರು ಗ್ರಾಮದಲ್ಲಿ ವಿವಾದರಹಿತ 7 ಎಕರೆ 4 ಗುಂಟೆ ಜಾಗವನ್ನು 2014ರಲ್ಲಿ ಜಿಲ್ಲಾಡಳಿತ ಮಂಜೂರು ಮಾಡಿದೆ. ಜಿಲ್ಲಾಡಳಿತ ನಿಗದಿ ಮಾಡಿರುವ 21,63,280 ರೂ. ಪಾವತಿಸಿ ಜಾಗವನ್ನು ಕೆಎಸ್ಸಾರ್ಟಿಸಿ ಸಂಸ್ಥೆ ತನ್ನ ಸುಪರ್ದಿಗೆ ಪಡೆದುಕೊಳ್ಳಬೇಕಾಗಿದೆ. ತದನಂತರ ಟೆಂಡರ್ ಕರೆದು ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕಾಗಿದೆ. ಇದಕ್ಕೆ ಅಗತ್ಯವಾದ ಅನುದಾನ ಕೂಡ ಕೆಎಸ್ಸಾರ್ಟಿಸಿ ಸಂಸ್ಥೆಗೆ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹುನ್ನಾರ: ಕೆಲ ಖಾಸಗಿ ಬಸ್ ಮಾಲಕರ ಕೂಟವು ಶಿವಮೊಗ್ಗ ನಗರದಲ್ಲಿ ಸರಕಾರಿ ಸಿಟಿ ಬಸ್‌ಗಳು ಓಡದಂತೆ ಮಾಡುವ ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಅನುಮಾನಗಳು ವ್ಯಕ್ತವಾಗುತ್ತಿವೆೆ.
ಈ ಹಿನ್ನೆಲೆಯಲ್ಲಿಯೇ ಜಾಗದ ಸಮಸ್ಯೆಯನ್ನು ಸೃಷ್ಟಿ ಮಾಡಲು ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿಯೇ ಯಡಿಯೂರಪ್ಪರವರು ಪ್ರಸ್ತುತ ಮಂಜೂರಾಗಿರುವ ಡಿಪೋ ಜಾಗ ರದ್ದುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ.
ಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಜಿ. ಮಾದಪ್ಪ, ಟ್ರಸ್ಟಿಗಳಾದ ಶಂಕರನಾಯ್ಕ, ಆಶಾ ಹರೀಶ್, ಹೊನ್ನಮ್ಮ ಮಾಲತೇಶ್, ಶೋಭಾ, ಒಂಕಾರಪ್ಪ, ಎಚ್. ವೆಂಕಟೇಶ್, ಕೋಡ್ಲು ಶ್ರೀಧರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.