ನೋಟ್ ಬ್ಯಾನ್ ಎಫೆಕ್ಟ್: ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ಶಿಕ್ಷಣ ಸಂಸ್ಥೆ

Update: 2016-12-26 15:32 GMT

ಗುಂಡ್ಲುಪೇಟೆ, ಡಿ.26: ಶಾಲೆಯ ಶುಲ್ಕ ಪಾವತಿ ಮಾಡದ 30 ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ಅಮಾನವೀಯ ಘಟನೆ ಮಾನಸ ವಿದ್ಯಾಲಯದಲ್ಲಿ ನಡೆದಿದೆ.

ಗುಂಡ್ಲುಪೇಟೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಮಾನಸ ವಿದ್ಯಾಲಯದಲ್ಲಿ ಇಂದು ಬೆಳಗ್ಗೆ 10 ಗಂಟೆಯ ವೇಳೆಗೆ ಶಾಲೆಯ ಆಡಳಿತ ಮಂಡಳಿ ಶುಲ್ಕ ಕಟ್ಟದ ವಿದ್ಯಾರ್ಥಿಗಳನ್ನು ಶಾಲೆಯ ಹೊರಗೆ ನಿಲ್ಲಿಸಿ ಕಠಿಣ ಶಿಕ್ಷೆ ನೀಡಿದ್ದು, ಬಿಸಿಲಿನಲ್ಲಿ ಶಾಲೆಯ ಬ್ಯಾಗ್ ಹೊತ್ತು ವಿದ್ಯಾರ್ಥಿಗಳು ಒಂದೇ ಸಮನೆ ನಿಂತಿರುವುದು ಕಂಡು ಬಂತು.

ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಾಲೆಯ ಶುಲ್ಕವನ್ನು ಕಟ್ಟುವಂತೆ ಅವರ ಪೋಷಕರಿಗೆ ವೌಖಿಕವಾಗಿ ಸೂಚನೆ ನೀಡಿದ್ದ ಮಾನಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಅದರಂತೆ ವಿದ್ಯಾರ್ಥಿಗಳು ತಮ್ಮ ಪೋಷಕರಲ್ಲಿ ಶಾಲೆಯ ಶುಲ್ಕ ಪಾವತಿಸುವಂತೆ ತಿಳಿಸಿದ್ದರು. ಆದರೆ ಪೋಷಕರು ತಮ್ಮಲ್ಲಿರುವ ಅಲ್ಪಪ್ರಮಾಣದ ಹಣವನ್ನು ಶಾಲೆಗೆ ಕಟ್ಟಲು ಹೋದಾಗ ಪೂರ್ಣ ಕಟ್ಟುವಂತೆ ಶಾಲೆಯ ಆಡಳಿತ ಮಂಡಳಿ ತಾಕೀತು ಮಾಡಿತ್ತು ಎಂದು ಹೇಳಲಾಗಿದೆ.

ಕೇಂದ್ರ ಸರಕಾರವು 500 ಮತ್ತು 1,000 ರೂ. ಮುಖ ಬೆಲೆಯ ನೋಟ್‌ಗಳನ್ನು ಅಮಾನ್ಯ ಮಾಡಿದ್ದರ ಪರಿಣಾಮ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಮೇಲೂ ಬಿಸಿ ತಟ್ಟಿದ್ದು, ಇದರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ನಿಲ್ಲುವಂತಾಗಿದೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

ಬ್ಯಾಂಕ್‌ಗಳಲ್ಲಿ ಹಾಗೂ ಎಟಿಎಂಗಳಲ್ಲಿ ನಗದು ಹಣ ಪಡೆಯಲು ಮಿತಿ ಮಾಡಿದ್ದರಿಂದ ಸಾರ್ವಜನಿಕರು ಜೀವನ ಸಾಗಿಸಲು ಬೇಕಾಗುವಷ್ಟು ಹಣ ಸಂಗ್ರಹಣೆ ಮಾಡಲು ಸಾಧ್ಯವಾಗದೆ ಇರುವುದೇ ಇಂತಹ ಸ್ಥಿತಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಇವೆಲ್ಲವನ್ನೂ ಗಮನಿಸಿದರೆ, ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಮತ್ತು ನಗದು ರಹಿತ ವ್ಯವಹಾರಕ್ಕೆ ಜಾಗೃತಿ ಮೂಡಿಸಬೇಕಾಗಿರುವ ಶಾಲೆಯ ಆಡಳಿತ ಮಂಡಳಿಯು ಕೇವಲ ಹಣದಾಸೆಗೆ ವಿದ್ಯಾರ್ಥಿಗಳನ್ನು ಶಾಲೆಯ ಹೊರ ಹಾಕಿ ಶಿಕ್ಷೆ ನೀಡುವಲ್ಲಿ ಮುಂದಾಗಿರುವುದು ದುರಂತವೇ ಸರಿ ಎನ್ನಬಹುದಾಗಿದೆ.

ಗುಂಡ್ಲುಪೇಟೆಯಲ್ಲಿನ ಮಾನಸ ವಿದ್ಯಾಲಯದಲ್ಲಿ ಶಾಲೆಗೆ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಶಾಲೆಯ ಹೊರಗಡೆ ಬಿಸಿಲಿನಲ್ಲಿ ನಿಲ್ಲಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ವಿದ್ಯಾಲಯದ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಶಾಲೆಯ ಹೊರಗಡೆ ನಿಲ್ಲಿಸಿರುವುದು ಖಂಡನಿೀಯ.

- ಎನ್. ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News