ಚಿಂತಾಮಣಿ: ಏಕಕಾಲಕ್ಕೆ 900 ಸಿಲಿಂಡರ್ ಸ್ಫೋಟ

Update: 2016-12-26 16:22 GMT

ಚಿಂತಾಮಣಿ, ಡಿ.26: ನಗರದ ಹೊರ ವಲಯದ ಬಾಗೇಪಲ್ಲಿ ರಸ್ತೆಯಲ್ಲಿರುವ ಎಸ್‌ಎಲ್‌ಎನ್ ಗ್ಯಾಸ್ ಏಜೆನ್ಸಿಯ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು ಏಕಕಾಲಕ್ಕೆ 900 ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಎರಡು ಲಾರಿ, ಒಂದು ಬೊಲೆರೋ ಜೀಪ್ ಸುಟ್ಟು ಕರಕಲಾಗಿದ್ದು, ಸುಮಾರು ಒಂದು ಕೋಟಿ ರೂ. ನಷ್ಟವುಂಟಾಗಿರುವ ಘಟನೆ ರವಿವಾರ ರಾತ್ರಿ ಸಂಭವಿಸಿದೆ.

ಸ್ಫೋಟಗೊಂಡ ಸಿಲಿಂಡರ್‌ಗಳು ಸುಮಾರು 200 ಮೀ.ಗಳಷ್ಟು ದೂರದಲ್ಲಿ ಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗದಿದ್ದರೂ ಗೋದಾಮಿನ ಹತ್ತಿರದಲ್ಲೇ ಇದ್ದ ವಿವೇಕಾನಂದ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಜೆಯನ್ನು ನೀಡಲಾಗಿದ್ದು, ಬಹುತೇಕ ಮಕ್ಕಳು ಊರಿಗೆ ತೆರಳಿದ್ದು, ಉಳಿದಂತಹ ಮಕ್ಕಳನ್ನು ಘಟನೆಯ ಸಂದರ್ಭದಲ್ಲಿ ನೆರೆದಿದ್ದ ಸಾರ್ವಜನಿಕರು ಸ್ಥಳಾಂತರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಶ್ರೀನಿವಾಸಪುರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋದಾಮಿನ ಅಕ್ಕಪಕ್ಕದಲ್ಲಿದ್ದ ವಿದ್ಯುತ್ ತಂತಿಗಳು, ಡಿಷ್ ಕೇಬಲ್‌ಗಳು ಸಂಪೂರ್ಣವಾಗಿ ಸುಟ್ಟಿರುವುದಲ್ಲದೆ, ನಗರಕ್ಕೆ ನೀರು ಸರಬರಾಜು ಮಾಡುವ ತೊಟ್ಟಿಯು ಈ ಸಮೀಪವೇ ಇದ್ದು, ಅದಕ್ಕೆ ಅಳವಡಿಸಿದ್ದ ಪಿವಿಸಿ ಪೈಪುಗಳು ಸುಟ್ಟು ಕರಕಲಾಗಿವೆ.

ಘಟನಾ ಸ್ಥಳಕ್ಕೆ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಡಾ.ದೀಪ್ತಿ ಆದಿತ್ಯ ಕಾನಡೆ, ಜಿಲ್ಲಾ ರಕ್ಷಣಾಧಿಕಾರಿ ಡಾ. ಚೈತ್ರಾ, ತಹಶೀಲ್ದಾರ್ ಗಂಗಪ್ಪ ,ಅಗ್ನಿಶಾಮಕ ದಳದ ಜಿಲ್ಲಾ ವರಿಷ್ಠಾಧಿಕಾರಿ, ಜಿಲ್ಲಾ ಉಪ ವಿಭಾಗಾಧಿಕಾರಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭೆೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News