ಕೆರೆಗೆ ಉರುಳಿ ಬಿದ್ದ ಕೆಎಸ್ಸಾರ್ಟಿಸಿ ಬಸ್
ತಪ್ಪಿದ ಭಾರೀ ಅನಾಹುತ
ಶಿವಮೊಗ್ಗ, ಡಿ. 26: ಕೆಎಸ್ಸಾರ್ಟಿಸಿ ಬಸ್‌ವೊಂದು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದ ಪರಿಣಾಮ ಸುಮಾರು 15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ನಗರದ ಹೊರವಲಯ ಗೋಂಧಿಚಟ್ನಳ್ಳಿ ಗ್ರಾಮದ ಶಿವಮೊಗ್ಗ - ಹರಿಹರ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ವರದಿಯಾಗಿದೆ.
ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮದಿಂದ ಕೆರೆಯು ನೀರಿಲ್ಲದೆ ಬರಿದಾಗಿದ್ದು, ಕಸಕಡ್ಡಿಯಿಂದ ತುಂಬಿಕೊಂಡಿತ್ತು. ಈ ಕಾರಣದಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದಂ ತಾಗಿದೆ. ಒಂದು ವೇಳೆ ಕೆರೆಯಲ್ಲಿ ನೀರು ತುಂಬಿಕೊಂಡಿದ್ದರೆ ಭಾರೀ ಪ್ರಮಾಣದ ಸಾವುನೋವು ಸಂಭವಿಸುತ್ತಿತ್ತು. ಬಸ್ ಚಾಲಕನ ಮಿತಿಮೀರಿದ ವೇಗ, ಅಜಾಗರೂಕ ಚಾಲನೆಯೇ ಅವಘಡಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ: ಅಪಘಾತಕ್ಕೀಡಾದ ಬಸ್ ಹರಿಹರದಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿತ್ತು. ಶಿವಮೊಗ್ಗದಿಂದ ಹರಿಹರದೆಡೆಗೆ ತೆರಳುತ್ತಿದ್ದ ಮತ್ತೊಂದು ಕೆಎಸ್ಸಾರ್ಟಿಸಿ ಬಸ್ ಕೆರೆಯ ಏರಿಯ ಬಳಿ ಬೈಕ್‌ವೊಂದನ್ನು ಓವರ್‌ಟೇಕ್ ಮಾಡಲು ಮುಂದಾಗಿದ್ದು, ಈ ವೇಳೆ ಶಿವಮೊಗ್ಗದೆಡೆಗೆ ಬರುತ್ತಿದ್ದ ಬಸ್ ಚಾಲಕನು ತನ್ನ ಬಸ್‌ನ್ನು ಸೈಡ್‌ಗೆ ತೆಗೆದುಕೊಳ್ಳಲು ಹೋದ ವೇಳೆ ಬಸ್ ಕೆರೆಗೆ ಉರುಳಿ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಪಲ್ಟಿಯಾದ ಬಸ್‌ನಲ್ಲಿ ಸಿಲುಕಿ ಬಿದ್ದಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದರು.
ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ನಗರದ ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಹಿಂದಿರುಗಿದ್ದಾರೆ. ವಿಷಯ
ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಂಚಾರ ಅಸ್ತವ್ಯಸ್ತ: ಅಪಘಾತ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದ ಕಾರಣದಿಂದ ಶಿವಮೊಗ್ಗ - ಹರಿಹರ ನಡುವಿನ ರಸ್ತೆಯಲ್ಲಿ ಸರಿಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿ ಪರಿಣಮಿಸಿತ್ತು.
ಎರಡು ಬದಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಡುವ ಬಿಸಿಲಿನಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಹರಸಾಹಸ ಪಡುವಂತಾಯಿತು.