×
Ad

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಚಿಂತನೆ : ಎ.ಮುನಿಯಪ್ಪ ಸ್ಪಷ್ಟನೆ

Update: 2016-12-26 23:05 IST

ಮಡಿಕೇರಿ, ಡಿ.26: ಮಾನವೀಯತೆ ಮರೆತು ದಿಡ್ಡಳ್ಳಿಯಲ್ಲಿ ಗಿರಿಜನರ ಗುಡಿಸಲುಗಳನ್ನು ತೆರವುಗೊಳಿಸಿರುವ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎ.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಡಕಟ್ಟು ಹಾಗೂ ಪರಿಶಿಷ್ಟ ಜನಾಂಗದ ಪ್ರಮುಖರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಗುಡಿಸಲು ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಯ ಕ್ರಮ ಅಮಾನವೀಯತೆಯಿಂದ ಕೂಡಿದೆ.

ತೆರವಿಗೆ ಹಿರಿಯ ಅಧಿಕಾರಿ ಮೌಖಿಕ ಆದೇಶ ನೀಡಿರಬಹುದು. ಆದರೆ, ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಯಂತ್ರಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿರುವುದು ಹೇಯ ಕೃತ್ಯವಾಗಿದೆ. ಇದನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದರಲ್ಲದೇ, ಅರಣ್ಯ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಸಂತ್ರಸ್ತ ದಿಡ್ಡಳ್ಳಿ ಭಾಗದ ಗಿರಿಜನರನ್ನು ಮುಖತಃ ಭೇಟಿ ಮಾಡಿ ಚರ್ಚಿಸಲಾಗಿದೆ. ಅವರ ನೋವು ಆಯೋಗದ ಗಮನಕ್ಕೆ ಬಂದಿದ್ದು, ಜಿಲ್ಲಾಡಳಿತ ಕೂಡ ಸಂತ್ರಸ್ತರ ನೆರವಿಗೆ ಧಾವಿಸಿದ್ದಲ್ಲದೇ, ಮೂಲಭೂತ ಸೌಕರ್ಯ ಕಲ್ಪಿಸುವ ಭರವಸೆಯನ್ನು ನೀಡಿದೆ ಎಂದರು.ದಿಡ್ಡಳ್ಳಿ ಭಾಗದ ಮೀಸಲು ಅರಣ್ಯ ಭಾಗದಲ್ಲಿ ಪುನರ್ವಸತಿ ಕಲ್ಪಿಸಿದರೆ, ಸುಪ್ರೀಂಕೋರ್ಟ್ ಮೊರೆಹೋಗುವುದಾಗಿ ಪರಿಸರವಾದಿಗಳು ಎಚ್ಚರಿಸಿರುವ ಬಗ್ಗೆ ಗಮನ ಸೆಳೆದಾಗ, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದರಲ್ಲದೇ, ಈಗಾಗಲೇ ಜಿಲ್ಲಾಡಳಿತ ಪುನರ್ವಸತಿಗಾಗಿ ಕೆಲವೆಡೆ ಜಾಗವನ್ನು ಗುರುತಿಸಿದೆ ಎಂದರು.
    ಪಾಲೆಮಾಡು ಪೈಸಾರಿ ನಿವಾಸಿಗಳಿಗೂ ಕೂಡ ಮುಂದಿನ 15 ದಿನಗಳೊಳಗಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಈಗಾಗಲೇ ಕಾರ್ಯ ಯೋಜನೆಯನ್ನು ಹಾಕಿಕೊಂಡಿದೆ ಎಂದು ಹೇಳಿದರು.
 ಬುಡಕಟ್ಟು ಆದಿವಾಸಿ ಪ್ರಮುಖರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಂದ ದಿಡ್ಡಳ್ಳಿಯ ಘಟನೆಗೆ ಸಂಬಂಧಿಸಿ ಮಾಹಿತಿ ಪಡೆಯಲಾಗಿದ್ದು, ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎ.ಮುನಿಯಪ್ಪ ಅವರು ತಿಳಿಸಿದರು.


 ಆಯೋಗದ ಸದಸ್ಯ ಎನ್. ದಿವಾಕರ್, ಜಿಲ್ಲಾಧಿಕಾರಿ ಡಾ.ರಿಚರ್ಡ್‌ವಿನ್ಸೆಂಟ್ ಡಿಸೋಜ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಐಟಿಡಿಪಿ ಅಧಿಕಾರಿ ಮಾಯಾದೇವಿ ಗಲಗಲಿ ಉಪಸ್ಥಿತರಿದ್ದರು


ದಿಡ್ಡಳ್ಳಿಯಲ್ಲಿ ಪ್ರತ್ಯೇಕ ಸಭೆ: ಮೂಲ ಆದಿವಾಸಿಗಳಿಗೆ ನಿವೇಶನ ನೀಡಲು ಒತ್ತಾಯ
ದಿಡ್ಡಳ್ಳಿಯಲ್ಲಿ ಮೂಲ ಆದಿವಾಸಿಗಳಿಗೆ ನೆಲೆ ನೀಡಿದ ನಂತರ, ಕೆಲವು ದಿನಗಳ ಹಿಂದೆ ಗುಡಿಸಲು ನಿರ್ಮಾಣ ಮಾಡಿದವರಿಗೆ ಸೂರು ನೀಡಿ ಎಂದು ದಿಡ್ಡಳ್ಳಿ ಮೂಲ ಆದಿವಾಸಿಗಳು ಹಾಗೂ ಮಾಲ್ದಾರೆ, ಚೆನ್ನಯ್ಯನಕೋಟೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


 ಮಾಲ್ದಾರೆಯ ಗ್ರಾಪಂ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಾಲ್ದಾರೆ ಗ್ರಾ.ಪಂ ಉಪಾಧ್ಯಕ್ಷ ಹಾಗೂ ಆದಿವಾಸಿ ಮುಖಂಡ ರಾಜು, ಮಾಲ್ದಾರೆ ವ್ಯಾಪ್ತಿಯಲ್ಲಿ ತಲೆತಲಾಂತರಗಳಿಂದ ವಾಸ ಮಾಡಿಕೊಂಡಿರುವ ಆದಿವಾಸಿಗಳಿಗೆ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡದೆ, ಕೇವಲ ಆರು ತಿಂಗಳ ಹಿಂದೆ ಬೇರೆಡೆಗಳಿಂದ ಬಂದು ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ಮೀಸಲು ಅರಣ್ಯವನ್ನು ಒತ್ತುವರಿ ಮಾಡಿಕೊಂಡವರಿಗೆ ಸರಕಾರ ಮೂಲಭೂತ ಸೌಕರ್ಯ ಹಾಗೂ ನಿವೇಶನ ನೀಡುವುದಾಗಿ ಭರವಸೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದರು.


 ಸರಕಾರದ ನಿರ್ಧಾರದಿಂದಾಗಿ ಮೂಲ ಆದಿವಾಸಿಗಳಿಗೆ ಅನ್ಯಾಯವಾಗಿದ್ದು, ಹಲವಾರು ವರ್ಷಗಳಿಂದ ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗೆ ಮೊದಲು ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ನಂತರ ತಹಶೀಲ್ದಾರ್ ಮಹದೇವಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದರು.


ಈ ಸಂದರ್ಭ ಮಾಜಿ ಜಿಪಂ ಅಧ್ಯಕ್ಷ ಜೆ.ಎ. ಕರುಂಬಯ್ಯ, ಗ್ರಾಪಂ ಅಧ್ಯಕ್ಷೆ ರಾಣಿ ಸೇರಿದಂತೆ ಮಾಲ್ದಾರೆ ಭಾಗದ ತೋಟದ ಮಾಲಕರು, ಮೂಲ ಆದಿವಾಸಿಗಳು ಹಾಜರಿದ್ದರು.
ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯ ರಾಮಪುರದಲ್ಲಿ 10 ಎಕರೆ ಹಾಗೂ ಬಸವನಹಳ್ಳಿ ಬಳಿ 6.7 ಎಕರೆ ಜಾಗವನ್ನು ಗುರುತಿಸಿ ಐಟಿಡಿಪಿ ಇಲಾಖೆಗೆ ಕಾಯ್ದಿರಿಸಲಾಗಿದೆ.
- ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News