ರಾಜ್ಯ ಬಿಜೆಪಿ ಬರ ಅಧ್ಯಯನ ತಂಡದಲ್ಲಿ ಸ್ಥಾನ ಪಡೆಯದ ಈಶ್ವರಪ್ಪ !
ಬೆಂಗಳೂರು, ಡಿ.27: ರಾಜ್ಯದಲ್ಲಿ ಬರಪೀಡಿತಕ್ಕೆ ತುತ್ತಾಗಿರುವ 139 ತಾಲೂಕುಗಳ ಕುರಿತು ಅಧ್ಯಯನ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಆರ್.ಅಶೋಕ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತ್‌ಕುಮಾರ್, ಸುರೇಶ್ ಅಂಗಡಿ ಸೇರಿದಂತೆ ಮತ್ತಿತರರ ತಂಡ ತುಮಕೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದೆ ಎಂದು ಅವರು ಹೇಳಿದರು.
ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಸಂಸದ ಶ್ರೀರಾಮುಲು, ಮಾಜಿ ಸಚಿವ ಗೋವಿಂದ ಕಾರಜೋಳ, ವಿಶ್ವೇಶ್ವರಯ್ಯ ಹೆಗಡೆ ಸೇರಿದಂತೆ ಹಲವು ಮುಖಂಡರು ಆನೇಕಲ್, ಹಾವೇರಿ, ವಿಜಯಪುರ, ಬೀದರ್, ಯಾದಗಿರಿ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅರವಿಂದ ಲಿಂಬಾವಳಿ ಮಾಹಿತಿ ನೀಡಿದರು.
ಇನ್ನು ಆರ್.ಅಶೋಕ್ ನೇತೃತ್ವದಲ್ಲಿ ಸಂಸದ ಪಿ.ಸಿ.ಮೋಹನ್, ಪ್ರತಾಪಸಿಂಹ, ಅರವಿಂದಲಿಂಬಾವಳಿ, ಸುರೇಶ್‌ಕುಮಾರ್ ಅವರನ್ನೊಳಗೊಂಡ ತಂಡವು ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಅವರು ಹೇಳಿದರು.
ಈ ಬಗ್ಗೆ ಈಶ್ವರಪ್ಪರವರನ್ನು ಪ್ರಶ್ನಿಸಿದಾಗ , ರಾಜ್ಯದ ಬರ ಪರಿಶೀಲನೆ ಕುರಿತ ಅಧ್ಯಯನ ಮಾಡಲು ಬಿಜೆಪಿ ಮೂರು ತಂಡಗಳನ್ನು ರಚಿಸಿದೆ. ಆ ತಂಡದಿಂದ ನನ್ನನ್ನು ಕೈಬಿಡಲಾಗಿದೆ ಎಂದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಏಕೆ ಬಿಟ್ಟಿದ್ದಾರೆಂದು ನನಗೆ ಗೊತ್ತಿಲ್ಲ. ಅದನ್ನು ನೀವು ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.