ಸ್ನೇಹಿತೆಯೊಂದಿಗೆ ಸುತ್ತಾಡಿದ ಆರೋಪ : ಬಜರಂಗಿಗಳಿಂದ ಯುವಕರಿಬ್ಬರಿಗೆ ಹಲ್ಲೆ
ಮಡಿಕೇರಿ, ಡಿ.27: ಸ್ನೇಹಿತೆಯೊಂದಿಗೆ ಅಬ್ಬಿಫಾಲ್ಸ್‌ಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಯುವಕರಿಬ್ಬರಿಗೆ ಬಜರಂಗಿಗಳು ಥಳಿಸಿ ಗಂಭೀರ ಹಲ್ಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ಕಳೆದ ಶುಕ್ರವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವೀರಾಜಪೇಟೆಯ ಸೈಫುದ್ದೀನ್ ಮಡಿಕೇರಿಯ ಸ್ನೇಹಿತ ಇಸ್ಬುಲ್ಲಾ ಮತ್ತು ವೀರಾಜಪೇಟೆ ಸಮೀಪದ ಕೋಲ್ತೋಡು ಬೈಗೋಡು ಪರಿಸರದ ಸ್ನೇಹಿತೆಯೊಂದಿಗೆ ಮಡಿಕೇರಿಯ ಅಬ್ಬಿಫಾಲ್ಸ್ ಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಮೈತಾಡಿ ಸಮೀಪದ ಸಾಮಿಯಾಲು ಎಂಬಲ್ಲಿ ಬಜರಂಗಿಗಳ ತಂಡ ಏಕಾಏಕಿ ದಾಳಿ ನಡೆಸಿದೆ.
ದೊಣ್ಣೆ ಹಾಗೂ ಸಿಮೆಂಟ್ ಶೀಟ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಸೈಫುಲ್ಲಾ ಮಾಹಿತಿ ನೀಡಿದ್ದು, ದಾಳಿಯಿಂದ ಇಸ್ಬುಲ್ಲಾ ಅವರಿಗೆ ಗಂಭೀರ ಗಾಯವಾಗಿ ಕೈ ಮುರಿತಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಶುಕ್ರವಾರ ತರಗತಿಗೆ ಬಿಡುವಿದೆ. ಎಲ್ಲಾದರೂ ಸುತ್ತಾಡಿಕೊಂಡು ಬರುವ ಎಂದು ಸ್ನೇಹಿತೆ ಒತ್ತಾಯ ಪಡಿಸಿದ ಕಾರಣ ತನ್ನ ಕಾರಿನಲ್ಲಿ ಅಬ್ಬಿಫಾಲ್ಸ್‌ಗೆ ತೆರಳಿದ್ದೆವು. ಅಬ್ಬಿಫಾಲ್ಸ್‌ಗೆ ದಾರಿ ತಿಳಿದಿಲ್ಲದ ಕಾರಣ ಮಡಿಕೇರಿಯಲ್ಲಿರುವ ಸ್ನೇಹಿತ ಇಸ್ಬುಲ್ಲಾ ಅವರನ್ನು ಕರೆುಕೊಂಡು ಅಬ್ಬಫಾಲ್ಸ್‌ಗೆ ತೆರಳಿದ್ದೆೆವು. ಅಲ್ಲಿಂದ ಬೆಳಗ್ಗೆ ಸುಮಾರು 10:30ರ ಸುಮಾರಿಗೆ ಹಿಂದಿರುಗುತ್ತಿದ್ದಾಗ ಮೈತಾಡಿ ಸಮೀಪ ಬಜರಂಗದಳದವರು ನಮ್ಮ ಕಾರನ್ನು ತಡೆದು ವಿಚಾರಿಸಿದರು. ಆ ವೇಳೆ ನಾವು ಸ್ನೇಹಿತರು ಅಬ್ಬಿಫಾಲ್ಸ್‌ಗೆ ಹೋಗಿ ಬರುತ್ತಿರುವುದಾಗಿ ತಿಳಿಸಿದೆವು. ಮಾತು ಮುಗಿಸುವಷ್ಟರಲ್ಲಿ ಏಕಾ ಏಕಿ ಹಲ್ಲೆ ನಡೆಸಲು ಆರಂಭಿಸಿದ ತಂಡದವರು, ಮರದ ಸೋಂಟೆ ಹಾಗೂ ಸಿಮೆಂಟ್ ಶೀಟ್‌ಗಳಿಂದ ಹಲ್ಲೆ ನಡೆಸಿದರು. ಬಳಿಕ ಪೊಲೀಸ್ ಠಾಣೆಗೆ ಕರೆದು ಕೊಂಡು ಹೋದರು ಎಂದು ಸೈಫುದ್ದೀನ್ ಮಾಹಿತಿ ನೀಡಿದರು.
ಬಳಿಕ ಠಾಣೆಗೆ ಮನೆಯವರನ್ನು ಕರೆಸಲಾಯಿತು. ಹೆತ್ತವರು ಬಂದ ಮೇಲೆ ಆಕೆ ನನ್ನನ್ನು ಬಲವಂತದಿಂದ ಕರೆತರಲಾಗಿದೆ ಎಂದು ಹೇಳಲಾರಂಭಿಸಿದ್ದು, ನಾವೂ ಕಂಗಾಲಾದೆವು. ಅದರಂತೆಯೇ ಪೊಲೀಸರು ದೂರು ದಾಖಲಿಸಿ ಕೊಂಡರು ಎಂದು ಸೈಫುದ್ದೀನ್ ದೂರಿದ್ದು, ಠಾಣೆಯಲ್ಲಿ ಪೊಲೀಸರೂ ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿ ನಮ್ಮಿಂದ ಬರೆಸಿಕೊಂಡು ಸಹಿ ಪಡೆದಿದ್ದಾರೆ. ಅಲ್ಲದೆ, ಹಲ್ಲೆ ನಡೆಸಿದ ಬಜರಂಗಿಗಳು ನನ್ನ ಮತ್ತು ಸ್ನೇಹಿತನ ಮೊಬೈಲ್‌ಗಳನ್ನು ಅಪಹರಿಸಿದ್ದಾರೆ. ಅಲ್ಲದೆ, ಮೊದಲು ನಮ್ಮ ಮೊಬೈಲ್‌ಗಳ ಮೂಲಕವೇ ವಾಟ್ಸ್‌ಆ್ಯಪ್‌ನ ಮೂಲಕ ಫೋಟೊಗಳನ್ನು ಹರಿ ಬಿಟ್ಟಿದ್ದಾರೆ ಎಂದು ದೂರಿದ್ದಾರೆ.
ಹಲ್ಲೆಗೊಳಗಾದ ಮತ್ತೋರ್ವ ಯುವಕ ಇಸ್ಬುಲ್ಲಾ ಅವರ ತಂದೆ ಪತ್ರಿಕೆಯೊಂದಿಗೆ ಮಾತನಾಡಿ, ಬೆಳಗ್ಗೆ 11 ಗಂಟೆಯ ವೇಳೆಗೆ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನನ್ನ ಮಗ ಕೈಮುರಿತಕ್ಕೊಳಗಾಗಿದ್ದಾನೆ. ಮತ್ತೋರ್ವನ ಕಿವಿಗೆ ಪೆಟ್ಟಾಗಿ ಆತನ ಕಿವಿಯಲ್ಲಿ ರಕ್ತ ಸೋರುತ್ತಿತ್ತು. ಆದರೂ ಮಾನವೀಯತೆ ಇಲ್ಲದ ಪೊಲೀಸರು ರಾತ್ರಿ 7 ಗಂಟೆಯ ವರೆಗೂ ಅವರಿಗೆ ಪ್ರಥಮ ಚಿಕಿತ್ಸೆ ನೀಡಿಲ್ಲ. ಅಲ್ಲದೆ, ರಾತ್ರಿಯ ವರೆಗೆ ನಾನು ಅವರನ್ನು ನೋಡಲು ಅಥವಾ ಮಾತನಾಡಲು ಪೊಲೀಸರು ಅನುಮತಿಸದೆ, ಬೈದು ಠಾಣೆಯಿಂದ ಹೊರಕಳುಹಿಸುತ್ತಿದ್ದರು ಎಂದು ದೂರಿದ್ದಾರೆ.
ಹಲ್ಲೆಯ ವೇಳೆ ನನ್ನ ಮಗ ಮತ್ತು ಆತನ ಸ್ನೇಹಿತನ ಮೊಬೈಲ್‌ಗಳನ್ನು ಹಲ್ಲೆಕೋರರು ಕಳವು ಮಾಡಿದ್ದಾರೆ. ಆ ಬಗ್ಗೆ ಪೊಲೀಸರು ದೂರು ದಾಖಲಿಸಲು ಮುಂದಾಗಿಲ್ಲ ಎಂದು ದೂರಿದ್ದಾರೆ.
ಹುಡುಗಿ ದೂರು ನೀಡಿದ ಬಳಿಕ ನನ್ನ ಮಗ ಮತ್ತು ಆತನ ಸ್ನೇಹಿತನನ್ನ ಹೆದರಿಸಿ ಸಾರ್ವಜನಿಕರು ಹಲ್ಲೆ ನಡೆಸಿರುವುದಾಗಿ ಮತ್ತು ಕೈಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಬಲವಂತವಾಗಿ ನನ್ನನ್ನು ಕರೆ ತಂದಿರುವುದಾಗಿ ಹುಡುಗಿ ದೂರು ನೀಡಿದ್ದಾಳೆ ಮತ್ತು ಯುವಕರು, ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.