ಶಿಕ್ಷಕರಿಗೆ ತಮ್ಮ ಶಾಲೆಯ ಅಭಿವೃದ್ಧಿಯ ಚಿಂತನೆ ಇರಬೇಕು: ಹೆಬ್ಬಾರ
ಮುಂಡಗೋಡ, ಡಿ.18: ಶಿಕ್ಷಕರಿಗೆ ತಮ್ಮ ಶಾಲೆಯ ಅಭಿವೃದ್ಧಿ ಕುರಿತು ತುಡಿತ ಇದ್ದಾಗ ಶಾಲೆ ಅಭಿವೃದ್ಧಿಯಾಗಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಮಂಗಳವಾರ ಮಳಗಿ ಸರಕಾರಿ ಮಾದರಿ ಹಿ.ಪ್ರಾ ಶಾಲೆಯಲ್ಲಿ ಅಕ್ಷರ ದಾಸೋಹದ ನೂತನ ಕೊಠಡಿ, ಸ್ಮಾರ್ಟ್ ಕ್ಲಾಸ್ ಹಾಗೂ ಸೈಕಲ್ ವಿತರಣೆ ಮಾಡಿ ಮಾತನಾಡುತ್ತಿದ್ದರು.
ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಹೆಣ್ಣು ಮಕ್ಕಳಿಗೆ ತಮ್ಮ ಕಾಲಮೇಲೆ ನಿಲ್ಲುವಂತಹ ಶಿಕ್ಷಣ ನೀಡಬೇಕು ಎಂದರು.
ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಸುರಗಿಮಠ, ಜಿಪಂ ಸದಸ್ಯರಾದ ರವಿ ಗೌಡಾ ಪಾಟೀಲ, ಜಯಾ ಹಿರಳ್ಳಿ, ಮಳಗಿ ಗ್ರಾಪಂ ಅಧ್ಯಕ್ಷೆ ರೇಖಾ ಅಂಡಗಿ, ಅಕ್ಷರ ದಾಸೋಹ ಅಧಿಕಾರಿ ಎಂ.ಎಸ್.ಸಾಳುಂಕೆ, ಬೆಡಸಗಾಂವ ಗ್ರಾಪಂ ಅಧ್ಯಕ್ಷ ಪ್ರಕಾಶ ನಾಯಕ್, ಜ್ಞಾನದೇವ ಗುಡಿಯಾಳ, ಕೃಷ್ಣಾ ಹಿರಳ್ಳಿ, ಕೆಡಿಸಿಸಿ ನಿರ್ದೇಶಕ ಡವಳೆ, ಎಸ್‌ಡಿಎಂಸಿ ಅಧ್ಯಕ್ಷ ಗುಡ್ಡಪ್ಪ ಪೂಜಾರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪಟ್ಟಾ ವಿತರಣೆ ಮಾಡಲಾಯಿತು.
ವೈ.ಬಿ.ಬಾದವಾಡಗಿ ಸ್ವಾಗತಿಸಿದರು. ಶಿಕ್ಷಕಿ ಗೋದಾವರಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಸಿ.ಬಿ.ಜೋಗಳೇಕರ ವಂದಿಸಿದರು.