ಭಾವನಾತ್ಮಕವಾಗಿ ಕೆರಳಿಸುವ ಬಿಜೆಪಿಯತ್ತ ಯುವಕರು ಆಕರ್ಷಿತರಾಗಲು ಕಾರಣ ಕಂಡುಕೊಳ್ಳಬೇಕಾಗಿದೆ: ರಮೇಶ್ ಹೆಗ್ಡೆ
ಸಾಗರ, ಡಿ.28: ಯುವಜನರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಕೊಂಡು ಒಂದಷ್ಟು ಹಣ ಸಂಪಾದನೆಗೆ ದಾರಿ ಮಾಡಿಕೊಟ್ಟಿದ್ದು ರಾಜೀವ್ ಗಾಂಧಿ ಹಾಗೂ ಎಸ್.ಎಂ.ಕೃಷ್ಣ. ಆದರೆ ಇಂದು ಯುವಜನರು ಕಾಂಗ್ರೆಸ್ ಜೊತೆ ಇಲ್ಲ. ಕಾಂಗ್ರೇಸ್ ಗರೀಭಿ ಹಟಾವೋದಂತಹ ಘೋಷಣೆ ಮೂಲಕ ಜನರ ಜೊತೆ ಇದ್ದರೇ, ಭಾವನಾತ್ಮಕ ವಿಚಾರಗಳನ್ನು ಕೆರಳಿಸುತ್ತಿರುವ ಬಿಜೆಪಿಯತ್ತ ಯುವಕರು ಆಕರ್ಷಿತರಾಗಲು ಕಾರಣವಾಗುತ್ತಿರುವ ಅಂಶಗಳೇನು ಎಂಬುದರ ಬಗ್ಗೆ ಕಾಂಗ್ರೆಸ್ ಮುಖಂಡರು ಚಿಂತನೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಹೆಗ್ಡೆ ಹೇಳಿದರು
ಇಲ್ಲಿನ ಮಹಿಳಾ ಸಮಾಜದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ 126ನೆ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಾ, ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಒಂದು ಕಾಲದಲ್ಲಿ ಸಮುದ್ರವಾಗಿದ್ದ ಕಾಂಗ್ರೆಸ್ ಇಂದು ಹಳ್ಳವಾಗಿದೆ. 544 ಲೋಕಸಭಾ ಸ್ಥಾನಗಳ ಪೈಕಿ ಈಗ 44 ಸ್ಥಾನಕ್ಕೆ ಇಳಿದಿದೆ. ಇದಕ್ಕೆ ಕಾರಣ ಅಧಿಕಾರ ಅನುಭವಿಸಿದ ಮುಖಂಡರು. ಅಧಿಕಾರ ಅನುಭವಿಸಿದರೇ ಹೊರತು, ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವಲ್ಲಿ ಮುಖಂಡರು ಪೂರ್ಣ ವಿಫಲವಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಕಾರಣವಲ್ಲ. ಅಧಿಕಾರಸ್ಥ ಮುಖಂಡರು ಕಾರಣವಾಗಿದ್ದಾರೆ ಎಂದು ದೂರಿದರು.
ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, 1885ರ ಡಿಸೆಂಬರ್ 28ರಂದು ಎಲ್ಲ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಉದ್ದೇಶದಿಂದ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡಿದೆ. ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷವು ತನ್ನ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ನಡೆದುಕೊಂಡು ಬರುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಅನುಭವಿಸಲು ಇರುವ ಪಕ್ಷವಲ್ಲ. ಬದಲಾಗಿ ತತ್ವಾದರ್ಶಗಳ ಮೇಲೆ ಸಮಾಜ ನಿರ್ಮಾಣ ಮಾಡುವುದು ಕಾಂಗ್ರೆಸ್ ಪ್ರಮುಖ ಆಶಯ ಎಂದರು. ಪ್ರಸ್ತುತ ರಾಷ್ಟ್ರೀಯತೆಯ ಆಧಾರದ ಮೇಲೆ ಹಿಂದುತ್ವವನ್ನು ಅಳೆಯುವ ಕೆಟ್ಟ ಪರಿಸ್ಥಿತಿಯಲ್ಲಿ ದೇಶವಿದೆ. ಸಂವಿಧಾನದಲ್ಲಿರುವ ರಾಷ್ಟ್ರೀಯತೆಯ ವ್ಯಾಖ್ಯೆಯನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಈ ಹೊತ್ತಿನಲ್ಲಿ ನಾವು ಹೆಚ್ಚು ಮುತುವರ್ಜಿಯಿಂದ ಪಕ್ಷ ಸಂಘಟನೆಗೆ, ಸಮೂಹ ಜಾಗೃತಿಯಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ. ಸಂವಿಧಾನದ ಆಶಯವನ್ನು ಬುಡಮೇಲು ಮಾಡುವ ಕೋಮುವಾದಿ ಶಕ್ತಿಗಳ ಮೂಲೋಚ್ಛಾಟನೆಗೆ ನಾವು ಪಣ ತೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ಸಿಗರಾದ ಅಹ್ಮದಲಿ ಖಾನ್ ಹಾಗೂ ಈಳಿ ನಾರಾಯಣಪ್ಪರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ನಗರಸಭೆ ಅಧ್ಯಕ್ಷೆ ಉಷಾ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ನಂದಾ ಗೊಜನೂರು, ಕೆ.ಹೊಳೆಯಪ್ಪ, ಎಲ್.ಚಂದ್ರಪ್ಪ, ಮುಹಮ್ಮದ್ ಖಾಸಿಂ ಇನ್ನಿತರರು ಉಪಸ್ಥಿತರಿದ್ದರು.