ಬಿಜೆಪಿ ಬರ ಅಧ್ಯಯನ ಪ್ರವಾಸಕ್ಕೆ ತುಮಕೂರಿನಲ್ಲಿ ಚಾಲನೆ
ತುಮಕೂರು, ಡಿ.28: ಕರ್ನಾಟಕದಲ್ಲಿ ಆವರಿಸಿರುವ ಭೀಕರ ಬರಪರಿಸ್ಥಿತಿ ಅಧ್ಯಯನ ನಡೆಸಲು ಮುಂದಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತುಮಕೂರಿನಿಂದ ತಮ್ಮ ಬರ ಅಧ್ಯಯನ ಪ್ರವಾಸವನ್ನು ಇಂದು ಪ್ರಾರಂಭಿಸಿದರು.
ಇಂದು ಬೆಳಗ್ಗೆ ಸಿದ್ದಗಂಗಾ ಸ್ವಾಮೀಜಿ ಆಶೀರ್ವಾದ ಪಡೆದು ತಮ್ಮ ಅಧ್ಯಯನ ಪ್ರವಾಸವನ್ನು ಆರಂಭಿಸಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ರಾಜ್ಯ ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ತಕ್ಷಣ ಕುಡಿಯುವ ನೀರು, ರೈತರಿಗೆ ಉಚಿತವಾಗಿ ಮೇವು ಸರಬರಾಜು ಮಾಡಬೇಕು. ಎಲ್ಲೆಡೆ ಗೋಶಾಲೆ, ಮೇವು ಬ್ಯಾಂಕ್ ಸ್ಥಾಪಿಸಬೇಕು, ಕೆರೆಗಳ ಹೂಳೆತ್ತುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಮತ್ತು ಸಚಿವರು ಸುಮ್ಮನೆ ಕೇಂದ್ರ ಸರಕಾರದತ್ತ ಬೊಟ್ಟು ಮಾಡದೆ ಮೊದಲು ತಮ್ಮ ಕನಿಷ್ಠ ಕರ್ತವ್ಯವನ್ನಾದರೂ ನಿರ್ವಹಿಸಬೇಕು. ರಾಜ್ಯದಲ್ಲಿ ಬರಪರಿಹಾರ ಕಾರ್ಯಗಳಿಗೆ ಹೆಚ್ಚಿನ ನೆರವನ್ನು ಕೋರಲು ಜನವರಿ 4ರಂದು ನಿಯೋಗದೊಂದಿಗೆ ತೆರಳಿ ಪ್ರಧಾನಿಗಳು ಮತ್ತು ಕೃಷಿ ಸಚಿವರನ್ನು ಭೇಟಿ ಮಾಡುವುದಾಗಿ ಯಡಿಯೂರಪ್ಪತಿಳಿಸಿದರು.