ಹಳೆಯ ನೋಟು ಡೆಪಾಸಿಟ್ : ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿ
ತುಮಕೂರು, ಡಿ.28: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮೇಲೆ ಬುಧವಾರ ಮಧ್ಯಾಹ್ನ ಅದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದರು.
500 ಹಾಗೂ 1,000 ರೂ. ಮುಖಬೆಲೆಯ ನೋಟುಗಳ ರದ್ದು ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಹಳೆಯ ನೋಟುಗಳು ಡಿಪಾಸಿಟ್ ರೂಪದಲ್ಲಿ ಸಂಗ್ರಹವಾಗಿರುವ ಸಂಶಯದ ಹಿನ್ನೆಲೆಯಲ್ಲಿ ನ. 8 ರಿಂದಲೂ ಐಟಿ ಅಧಿಕಾರಿಗಳು ತುಮಕೂರು ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕಿನ ಮೇಲೆ ದಾಳಿ ನಡೆಸಬಹುದು ಎಂದು ನಿರೀಕ್ಷಿಸಲಾಗಿತ್ತು.
ಅದರಂತೆ ಬುಧವಾರ ಅದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕಿ ನಂದಿತಾ ದಾಸ್, ಉಪ ಆಯುಕ್ತ ಚೇತನ್, ಅಧಿಕಾರಿಗಳಾದ ನಿರ್ಮಲ ಡೇವಿಡ್ ಸೇರಿದಂತೆ 8 ಜನ ಅಧಿಕಾರಿಗಳನ್ನು ಒಳಗೊಂಡ ಬೆಂಗಳೂರು ಉಪವಿಭಾಗಕ್ಕೆ ಸೇರಿದ ಸುಮಾರು 35 ಜನ ಅಧಿಕಾರಿಗಳ ತಂಡ ಬ್ಯಾಂಕಿನ ಮೇಲೆ ದಾಳಿ ನಡೆಸಿ, ಕಡತಗಳ ಪರಿಶೀಲನೆಯಲ್ಲಿ ತೊಡಗಿದೆ.
ಬುಧವಾರ ಬ್ಯಾಂಕಿನ ವ್ಯವಹಾರ ಎಂದಿನಂತೆ ನಡೆಯುತ್ತಿದ್ದರೂ , ಬ್ಯಾಂಕಿನ ಮುಂಬಾಗಿಲಿನ ಗೇಟ್ ಭದ್ರಪಡಿಸಿ ತಪಾಸಣೆಯನ್ನು ಮುಂದುವರೆಸಿದ್ದಾರೆ.
ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ನರಸಿಂಹಮೂರ್ತಿಯವರ ಸಮ್ಮುಖದಲ್ಲಿಯೇ ಪ್ರತಿ ಲಾಕರ್‌ಗಳನ್ನು ಓಪನ್ ಮಾಡಿ ಚೆಕ್ ಮಾಡಲಾಗುತ್ತಿದ್ದು, ನ. 8 ರ ನಂತರ ಬ್ಯಾಂಕಿಗೆ ಡಿಪಾಸಿಟ್ ಆಗಿರುವ ಹಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.