×
Ad

ಕಾಡಾನೆ ದಾಳಿಗೆ ಕಾರ್ಮಿಕ ಬಲಿ : ಸ್ಥಳದಲ್ಲಿ ಮೃತದೇಹವಿಟ್ಟು ಪ್ರತಿಭಟನೆ

Update: 2016-12-29 19:08 IST

ಸಿದ್ದಾಪುರ, ಡಿ.29: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ವಡ್ಡರಕಾಡು ಕಾಫಿ ತೋಟದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕನೋರ್ವ ಬಲಿಯಾಗಿರುವ ಘಟನೆ ಗುರುವಾರ ನಡೆದಿದೆ. ಮಾಲ್ದಾರೆಯ ಮೈಲಾತ್‌ಪುರ ನಿವಾಸಿ ಚೆಲುವ (37) ಎಂಬಾತನೆ ಸಾವನ್ನಪ್ಪಿದ ದುರ್ದೈವಿ.

ಮೈಲಾತ್‌ಪುರ ಗ್ರಾಮದಿಂದ ಜೀಪಿನಲ್ಲಿ ಇತರ ಕಾರ್ಮಿಕರೊಂದಿಗೆ ತೆರಳಿ ವಡ್ಡರಕಾಡು ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಮಧ್ಯಾಹ್ನ 12 ಗಂಟೆ ಸುಮಾರಿಗೆ ಟ್ರ್ಯಾಕ್ಟರ್‌ನಲ್ಲಿ ಚಾಲಕ ಫಾರೂಕ್, ಕಾರ್ಮಿಕರಾದ ವೆಂಕಟೇಶ ಮತ್ತು ಚೆಲುವ ತೋಟದ ಗೋದಾಮಿಗೆ ತೆರಳಿದ್ದಾರೆ. ಈ ಸಂದರ್ಭ ಹಠಾತ್ತನೆ ಬಂದ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ಚಾಲಕ ಸೇರಿ ಇಬ್ಬರು ಪ್ರಾಣಾಪಾಯದಿಂದ ಪಾರಾದರೆ ಚೆಲುವ ಎಂಬಾತನನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ  ಬಿಸಾಡಿ ತುಳಿದು ಸಾಯಿಸಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಾರ್ಮಿಕರು ಇಲಾಖೆ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕಾಡಾನೆ ಹಾವಳಿ ತಡೆ ಹಾಗೂ ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸ್ಥಳದಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.

ತಮಿಳುನಾಡು ಮೂಲದ ಮುತ್ತಪ್ಪ ಚೆಟ್ಟಿಯಾರ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಘಟನೆ ಸಂಭವಿಸಿದ್ದು, ತೋಟದ ಮಾಲಿಕರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಇದ್ದರೂ ಮಾಲಿಕರು ಮುಂಜಾಗ್ರತ ಕ್ರಮವಾಗಿ ಯಾವುದೇ ಭದ್ರತೆ ವ್ಯವಸ್ಥೆ ಮಾಡದೆ ಇರುವುದರಿಂದ ಘಟನೆ ಸಂಭವಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸ್ಥಳದಲ್ಲಿ ನೂರಾರು ಕಾರ್ಮಿಕರು ಮತ್ತು ಗ್ರಾಮ ನಿವಾಸಿಗಳು ಜಮಾಯಿಸಿದರು. ಈ ಸಂದರ್ಭ ಪ್ರತಿಭಟನಾಕಾರರಲ್ಲಿ ಕೆಲವರು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಸ್ಥಳಕ್ಕೆ ತೋಟದ ಮಾಲಿಕರು ಬಂದು ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾತ್ರಿವರೆಗೂ ಪ್ರತಿಭಟನೆ ಮುಂದುವರೆಸಿದ್ದಾರೆ.

 ತಾ.ಪಂ ಸದಸ್ಯ ಅಜಿತ್ ಕರುಂಬಯ್ಯ, ಮಾಲ್ದಾರೆ ಗ್ರಾ.ಪಂ ಉಪಾಧ್ಯಕ್ಷ ರಾಜು, ಸದಸ್ಯ ಕರುಂಬಯ್ಯ, ಸಿದ್ದಾಪುರ ಗ್ರಾ.ಪಂ ಸದಸ್ಯ ಹುಸೈನ್ ಮತ್ತಿತರರು ಭೇಟಿ ನೀಡಿದರು.

 ಠಾಣಾಧಿಕಾರಿ ಸಂತೋಶ್ ಕಶ್ಯಪ್ ಅರಣ್ಯಾಧಿಕಾರಿಗಳಾದ ಗೋಪಾಲ್, ದೇವಯ್ಯ ಗ್ರಾಮ ಲೆಕ್ಕಿಗ ಮಂಜುನಾಥ್ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News