ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ : ಚಿಗುರಿದ ಆಶಾವಾದ

Update: 2016-12-29 14:25 GMT

ವಾಷಿಂಗ್ಟನ್, ಡಿ.29: ಪರಮಾಣು ಸರಬರಾಜುದಾರರ ಗುಂಪು ಅಥವಾ (ಎನ್‌ಎಸ್‌ಜಿ) ಸದಸ್ಯ ರಾಷ್ಟ್ರಗಳ ನಡುವೆ ಮೂಡಿಬಂದಿರುವ ಪ್ರಸ್ತಾವಿತ ಕರಡು ಮಸೂದೆಯು ಭಾರತಕ್ಕೆ ಈ ಪ್ರತಿಷ್ಠಿತ ಗುಂಪಿನ ಸದಸ್ಯನಾಗಲು ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ. ಆದರೆ ಅಮೆರಿಕಾದ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ ಅವರ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದ್ದು ಬಳಿಕಷ್ಟೇ ಈ ಪ್ರಕ್ರಿಯೆಗೆ ಚಾಲನೆ ದೊರಕಬಹುದು.

ಎನ್‌ಎಸ್‌ಜಿ ಗುಂಪಿಗೆ ಭಾರತದ ಸದಸ್ಯತ್ವವನ್ನು ಅಮೆರಿಕಾ ಪ್ರಬಲವಾಗಿ ಬೆಂಬಲಿಸುತ್ತಾ ಬಂದಿದೆ. ಅದಾಗ್ಯೂ ಒಬಾಮಾ ಅವರ ಅಧಿಕಾರಾವಧಿ ಜನವರಿ 20ಕ್ಕೆ ಕೊನೆಗೊಳ್ಳಲಿದ್ದು, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವೂ ಒಬಾಮಾ ಅವರ ಹಾದಿಯಲ್ಲೇ ಸಾಗಿ ಭಾರತದ ಬೆಂಬಲಕ್ಕೆ ನಿಂತರೆ ಮಾತ್ರ ಭಾರತದ ಆಶಯಕ್ಕೆ ಬಲ ಬರುತ್ತದೆ.

   ಪರಮಾಣು ಪ್ರಸರಣ ತಡೆ ಒಪ್ಪಂದ (ಎನ್‌ಪಿಟಿ)ಕ್ಕೆ ಸಹಿ ಹಾಕದ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳಿಗೆ ಎನ್‌ಎಸ್‌ಜಿ ಸದಸ್ಯತ್ವ ನೀಡುವ ಕರಡು ಪ್ರಸ್ತಾವನೆಯನ್ನು ಎನ್‌ಎಸ್‌ಜಿ ಮಾಜಿ ಅಧ್ಯಕ್ಷ ರಫೇಲ್ ಮರಿಯಾನೋ ಗ್ರಾಸ್ಸಿ ಮಂಡಿಸಿದ್ದಾರೆ. ಪ್ರಸ್ತುತ ಎನ್‌ಎಸ್‌ಜಿ ಅಧ್ಯಕ್ಷರಾಗಿರುವ ದಕ್ಷಿಣ ಕೊರಿಯಾದ ಪರವಾಗಿ ಅವರು ಈ ಕರಡು ಪ್ರಸ್ತಾವನೆ ಮಂಡಿಸಿದ್ದಾರೆ.

   ಎನ್‌ಪಿಟಿಗೆ ಸಹಿ ಹಾಕದಿರುವ ರಾಷ್ಟ್ರಗಳಿಗೆ ಪೂರ್ಣ ಪ್ರಮಾಣದ ಪರಮಾಣು ವ್ಯವಹಾರದ ವಿಶೇಷ ಸೌಲಭ್ಯ ದೊರಕಬೇಕಿದ್ದರೆ ಆ ರಾಷ್ಟ್ರಗಳು ‘ಒಂಬತ್ತು ಪ್ರಮುಖ ಬದ್ಧತೆ’ಗಳನ್ನು ಒಪ್ಪಿಕೊಳ್ಳಬೇಕು ಎಂಬ ಅಂಶವನ್ನು ಎರಡು ಪುಟಗಳ ಕರಡು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ ಎಂದು ಭಾರತ- ಅಮೆರಿಕ ಪರಮಾಣು ಒಪ್ಪಂದವನ್ನು ಮತ್ತು ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವುದನ್ನು ಪ್ರಭಲವಾಗಿ ವಿರೋಧಿಸುತ್ತಿರುವ ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿಯಾಗಿರುವ ಶಸ್ತ್ರಾಸ್ತ್ರ ನಿಯಂತ್ರಣ ಮಂಡಳಿ (ಎಸಿಎ) ತಿಳಿಸಿದೆ.

   ಕರಡು ಪ್ರಸ್ತ್ತಾವನೆಯಲ್ಲಿ ನಿಯಮಗಳನ್ನು ಸಡಿಲಗೊಳಿಸಿರುವುದನ್ನು ಟೀಕಿಸಿರುವ ಎಸಿಎ ಸದಸ್ಯ ಡೆರಿಲ್ ಜಿ.ಕಿಂಬಲ್, ಭಾರತ ಈಗಾಗಲೇ ಈ ಒಂಬತ್ತು ಮಾನದಂಡಗಳಿಗೂ ಬಾಧ್ಯನಾಗಿರುವ ಕಾರಣ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಸುಲಭದಲ್ಲಿ ದಾರಿ ಮಾಡಿ ಕೊಟ್ಟಂತಾಗಿದೆ. ಮತ್ತು ಈ ಬಗ್ಗೆ ಈ ತಿಂಗಳು ವಿಯೆನ್ನಾದಲ್ಲಿ ನಡೆದ ಎನ್‌ಎಸ್‌ಜಿ ಸಸ್ಯ ರಾಷ್ಟ್ರಗಳ ಸಭೆಯಲ್ಲಿ ಚರ್ಚೆ ನಡೆದಿತ್ತು ಎಂದು ಹೇಳಿದ್ದಾರೆ.

  ಒಬಾಮಾ ಆಡಳಿತಾವಧಿಯಲ್ಲೇ ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ದೊರಕುವ ಸುವರ್ಣಾವಕಾಶ ಇತ್ತು. ಆದರೆ ಚೀನಾ ತೊಡರುಗಾಲು ಇಕ್ಕಿತ್ತು. ಈ ಹಿನ್ನೆಲೆಯಲ್ಲಿ ಭಾರತ- ಅಮೆರಿಕಾ ಸಂಬಂಧದಲ್ಲಿ ಅಪೂರ್ಣಗೊಂಡಿರುವ ಒಂದು ಪ್ರಮುಖ ‘ಅಜೆಂಡಾ’ವನ್ನು ಒಬಾಮಾ ಅವರ ಉತ್ತರಾಧಿಕಾರಿ ಟ್ರಂಪ್ ಪೂರ್ತಿಗೊಳಿಸಬೇಕಿದೆ.

  ರಿಪಬ್ಲಿಕನ್ ಆಡಳಿತದಲ್ಲಿ ಜಾರ್ಜ್ ಬುಷ್ ಅವರ ಅವಧಿಯಲ್ಲಿ ಭಾರತ-ಅಮೆರಿಕಾ ಪರಮಾಣು ಒಪ್ಪಂದಕ್ಕೆ ಸಹಿ ಬಿದ್ದಿದ್ದು , ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈವರೆಗೆ ಈ ಒಪ್ಪಂದದ ಬಗ್ಗೆ ಚಕಾರ ಎತ್ತಿಲ್ಲ. ಅದಾಗ್ಯೂ ಅಧ್ಯಕ್ಷೀಯ ಪರಿವರ್ತತಾ ತಂಡದೊಡನೆ ಭಾರತದ ಉನ್ನತ ಅಧಿಕಾರಿಗಳ ಮುಂಬರುವ ಮಾತುಕತೆ ಸಂದರ್ಭ ಈ ವಿಷಯ ಚರ್ಚೆಗೆ ಬರುವ ನಿರೀಕ್ಷೆಯಿದೆ.

     ರಫೇಲ್ ಮರಿಯಾನೋ ಗ್ರಾಸಿ ಮಂಡಿಸಿರುವ ಕರಡು ಪ್ರಸ್ತಾವನೆ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಇರುವ ನಿರ್ಬಂಧಗಳನ್ನು ಕನಿಷ್ಟ ಮಟ್ಟಕ್ಕೆ ಇಳಿಸಿದೆ. ಇಲ್ಲಿ ತಿಳಿಸಲಾಗಿರುವ ನಿಯಮಗಳು ಅಸ್ಪಷ್ಟವಾಗಿದೆ ಎಂದು ಪರಮಾಣು ಪ್ರಸರಣ ತಡೆ ಒಪ್ಪಂದದ ಚಕ್ರವರ್ತಿ ಎನಿಸಿಕೊಂಡಿರುವ ಡೆರಿಲ್ ಜಿ.ಕಿಂಬಲ್ ಅಭಿಪ್ರಾಯ ಪಡುತ್ತಾರೆ. ಈ ಪ್ರಸ್ತಾವನೆಯಿಂದ ಭಾರತಕ್ಕೆ ಅನುಕೂಲವಾಗಲಿದೆ. ಸೆಪ್ಟೆಂಬರ್ 2008ರಂದು ಭಾರತ ಒಪ್ಪಿಕೊಂಡು ಸಹಿ ಹಾಕಿರುವ ಭಾದ್ಯತೆಗಳನ್ನೇ ಇಲ್ಲಿ ಹೆಸರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

  ಉದಾಹರಣೆಗೆ, ಸದಸ್ಯತ್ವ ಪಡೆಯಲು ಸೂಚಿಸಿರುವ ಮಾನದಂಡದ ಪ್ರಕಾರ , ಭಾರತ ಅಥವಾ ಪಾಕಿಸ್ತಾನಗಳು ನಾಗರಿಕ ಮತ್ತು ಸೈನಿಕ ಉದ್ದೇಶಕ್ಕೆ ಪರಮಾಣು ಬಳಸುವ ಕುರಿತು ತಮ್ಮ ಯೋಜನೆಯನ್ನು ವಿವರಿಸಬೇಕು. ನಾಗರಿಕ ಪರಮಾಣು ತಂತ್ರಜ್ಞಾನವನ್ನು ಸೈನಿಕ ಉದ್ದೇಶಕ್ಕೆ ವರ್ಗಾಯಿಸುವುದಿಲ್ಲ ಎಂಬ ಬಗ್ಗೆ ಇಲ್ಲಿ ಯಾವುದೇ ಖಾತರಿ ನೀಡುವ ಅಗತ್ಯವಿಲ್ಲ. ಭಾರತವು ಈ ಮಾನದಂಡವನ್ನು ಈಗಾಗಲೇ ಪೂರೈಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News