×
Ad

ಹೆಚ್ಚಿನ ಬರ ಪರಿಹಾರ ಬಿಡುಗಡೆಗೆ ಪ್ರಧಾನಿಗೆ ಮುಖ್ಯಮಂತ್ರಿ ಮನವಿ

Update: 2016-12-30 21:53 IST

ಬೆಂಗಳೂರು, ಡಿ. 30: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗವು ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಉಪಶಮನ ಉಪಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕೂಡಲೇ 4702.54 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ  ಮೋದಿಗೆ ಮನವಿ ಸಲ್ಲಿಸಿತು.

ಶುಕ್ರವಾರ ಸಂಜೆ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸರ್ವಪಕ್ಷ ನಿಯೋಗ ರಾಜ್ಯದ ಬಹುಭಾಗ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಎಂಟರಿಂದ 12 ವಾರಗಳ ಕಾಲ ಸತತವಾಗಿ ಒಣ ಹವೆ ದಾಖಲಾಗಿದೆ ಎಂದು ರಾಜ್ಯದ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.

 ಮುಂಗಾರು ಹಂಗಾಮಿನಲ್ಲಿ ರಾಜ್ಯದ 176 ತಾಲೂಕುಗಳ ಪೈಕಿ 139 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿತವಾಗಿದೆ. ಮಳೆ ಪ್ರಮಾಣದ ಕೊರತೆಯ ಹಿನ್ನೆಲೆಯಲ್ಲಿ, ರಾಜ್ಯದ 36.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ 17,193 ಕೋಟಿ ರೂ. ಅಂದಾಜು ಮೌಲ್ಯದ ಬೆಳೆ ಹಾನಿಯಾಗಿದೆ. ಬರಕ್ಕೆ 35 ಲಕ್ಷ ರೈತರು ಬಾಧಿತರಾಗಿದ್ದಾರೆ. ರಾಜ್ಯದಲ್ಲಿ ಈ ಬೀಕರ ಬರದಿಂದ ಕೃಷಿ, ವಿದ್ಯುತ್ ಉತ್ಪಾದನೆ, ಅಂತರ್ಜಲ ಮರುಪೂರಣ, ಕುಡಿಯುವ ನೀರು ಪೂರೈಕೆ ಹಾಗೂ ಮೇನ ಲಭ್ಯತೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ನಿಯೋಗ ಉಲ್ಲೇಖಿಸಿದೆ.

ಪ್ರಸ್ತುತ ಹಿಂಗಾರು ಹಂಗಾಮಿನ ಅವಧಿಯಲ್ಲೂ ಮಳೆಯ ಪ್ರಮಾಣದಲ್ಲಿ ದಾಖಲೆಯ ಶೇ.80 ರಷ್ಟು ಕೊರತೆ ಉಂಟಾಗಿರುವುದು ರಾಜ್ಯದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಸತತ ಆರನೆ ಬಾರಿಗೆ ಬರ ಪರಿಸ್ಥಿತಿ ಎದುರಾಗಿದೆ ಎಂದು ಪ್ರಧಾನಿಗಳಿಗೆ ಮನವರಿಕೆ ಮಾಡಿದೆ.

ಬರ ಪರಿಹಾರಕ್ಕಾಗಿ ರಾಜ್ಯ ಸರಕಾರ 4702.54 ಕೋಟಿ ರೂ. ಆರ್ಥಿಕ ನೆರವು ಕೋರಿ ಕೇಂದ್ರ ಕೃಷಿ ಸಚಿವರಿಗೆ ನ.15 ರಂದು ಮನವಿ ಸಲ್ಲಿಸಿತ್ತು. ಕೇಂದ್ರದ ಅಧಿಕಾರಿಗಳ ತಂಡ ನ. 2 ರಿಂದ 5 ರವರೆಗೆ ಬರ-ಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದೆ. ಆದರೆ ಇನ್ನೂ ಪರಿಹಾರ ಮಂಜೂರು ಮಾಡಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿದೆ ಎಂದು ಅಸಹಾಯಕತೆ ತೋಡಿಕೊಂಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಅತಿವೃಷ್ಟಿಯಿಂದ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ನೆರೆ ಪರಿಸ್ಥಿತಿ ಉದ್ಭವಿಸಿ ಅಪಾರ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ತುರ್ತು ಪರಿಹಾರ ಕ್ರಮಕ್ಕಾಗಿ ರಾಜ್ಯಸರಕಾರವು 75 ಕೋಟಿ ರೂ ಬಿಡುಗಡೆ ಮಾಡಿದೆ. ಅಲ್ಲದೆ, ಅ. 28 ರಂದು ಕೇಂದ್ರ ಗೃಹ ಸಚಿವರಿಗೆ ನೆರೆ ಪರಿಹಾರ ಕಾಮಗಾರಿಗಳಿಗೆ 386.44 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News