×
Ad

ಭದ್ರಾ ನಾಲೆಗಳಿಗೆ ನೀರು ಬಿಡುಗಡೆ:ವೇಳಾಪಟ್ಟಿ ಪ್ರಕಟ

Update: 2016-12-30 22:57 IST

ಬಲದಂಡೆಗೆ 40, ಎಡದಂಡೆಗೆ 45 ದಿನಗಳ ಕಾಲ ನೀರು ಹರಿಸಲು ನಿರ್ಧಾರ
ಶಿವಮೊಗ್ಗ, ಡಿ. 30: ಮುಂಬರುವ 2017 ರ ಜನವರಿಯಿಂದ ಮೇ ಅಂತ್ಯದವರೆಗಿನ ಐದು ತಿಂಗಳ ಅವಧಿಯಲ್ಲಿ ಭದ್ರಾ ನಾಲೆಗಳಿಗೆ ನೀರು ಹರಿಸುವ ಹಾಗೂ ಸ್ಥಗಿತಗೊಳಿಸುವ ದಿನಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ.


ಈ ಪ್ರಕಾರ ಜಲಾಶಯದ ಬಲದಂಡೆಗೆ ನಾಲ್ಕು ಹಂತಗಳಲ್ಲಿ 40 ದಿವಸಗಳ ಕಾಲ ಹಾಗೂ ಎಡ ದಂಡೆಯ ನಾಲೆಗೆ 3 ಹಂತಗಳಲ್ಲಿ 45 ದಿವಸಗಳ ಕಾಲ ನೀರು ಹರಿಸಲಾಗುತ್ತಿದೆ. ಬಲದಂಡೆಗೆ 84 ಹಾಗೂ ಎಡ ದಂಡೆಗೆ 55 ದಿನಗಳ ಕಾಲ ನೀರು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ನಗರದ ಹೊರವಲಯ ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ವ್ಯಾಪ್ತಿ(ಕಾಡಾ) ಕಚೇರಿಯಲ್ಲಿ ಶುಕ್ರವಾರ ಕಾಡಾದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅಧ್ಯಕ್ಷತೆಯಲ್ಲಿ ಜರಗಿದ ಭದ್ರಾ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ಜನಪ್ರತಿನಿಧಿಗಳು, ರೈತ ಮುಖಂಡರು, ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಹಕಾರ ನೀಡಿ: ಸಭೆಯ ನಂತರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಸಮಿತಿಯ ಅಧ್ಯಕ್ಷ ಎಚ್.ಎಸ್.ಸುಂದರೇಶ್‌ರವರು ಮಾತನಾಡಿದರು. ಡ್ಯಾಂನ ನೀರಿನ ಮಟ್ಟ 116 ಅಡಿಯವರೆಗೂ ಎಡದಂಡೆಗೆ ನೀರು ಹರಿಸಬಹುದಾಗಿದೆ. ಆದರೆ ಈ ಮಟ್ಟದಲ್ಲಿ ಬಲದಂಡೆಗೆ ನೀರು ಹರಿಸಲು ಸಾಧ್ಯವಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಎಡದಂಡೆಗೆ ಐದು ದಿನಗಳ ಕಾಲ ಹೆಚ್ಚುವರಿ ನೀರು ಲಭ್ಯವಾಗಲಿದೆ ಎಂದರು.

ಸಮಿತಿಯ ಸದಸ್ಯರು ಸುದೀರ್ಘ, ಕೂಲಂಕಷವಾಗಿ ಚರ್ಚಿಸಿ, ಅಧಿಕಾರಿಗಳ ಅಭಿಪ್ರಾಯ ಪಡೆದು ಮುಂದಿನ ಐದು ತಿಂಗಳ ಅವಧಿಯಲ್ಲಿ ನೀರು ಹರಿಸುವ ಹಾಗೂ ಸ್ಥಗಿತಗೊಳಿಸುವ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಇದಕ್ಕೆ ಅಚ್ಚುಕಟ್ಟು ವ್ಯಾಪ್ತಿಯ ರೈತರು, ಬಳಕೆದಾರರು ಸಹಕಾರ ನೀಡಬೇಕು ಎಂದು ಎಚ್.ಎಸ್.ಸುಂದರೇಶ್‌ರವರು ಮನವಿ ಮಾಡಿದ್ದಾರೆ.


 ಎಡ ನಾಲೆ: ಎಡನಾಲೆಗೆ ಮೂರು ಹಂತಗಳಲ್ಲಿ ತಲಾ 15 ದಿನಗಳಂತೆ ನೀರು ಹರಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ ಜನವರಿ 5 ರಿಂದ 19 ರವರೆಗಿನ 15 ದಿನಗಳ ಕಾಲ ನೀರು ಬಿಡಲಾಗುತ್ತಿದ್ದು, ಜ. 20ರಿಂದ ಫೆ. 2 ರವರೆಗಿನ 30 ದಿನಗಳ ಕಾಲ ನೀರು ಹರಿಸುವಿಕೆ ಸ್ಥಗಿತಗೊಳಿಸಲಾಗುತ್ತಿದೆ. ಫೆ.19ರಿಂದ ಮಾ.5 ರವರೆಗಿನ 15 ದಿನಗಳ ಕಾಲ ನೀರು ಹರಿಸಲಾಗುತ್ತಿದ್ದು, ಮಾ.6 ರಿಂದ ಮಾ. 30 ರವರೆಗಿನ 25 ದಿನಗಳ ಕಾಲ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಕೈಗೊಳ್ಳಲಾಗಿದೆ.

16 ಟಿಎಂಸಿ ನೀರು ಡ್ಯಾಂನಲ್ಲಿ ಬಳಕೆಗೆ ಲಭ್ಯ
ಪ್ರಸ್ತುತ ಭದ್ರಾ ಡ್ಯಾಂನಲ್ಲಿ 144 (ಗರಿಷ್ಠ ಮಟ್ಟ:186) ಅಡಿ ನೀರಿದೆ. ಟಿಎಂಸಿ ಲೆಕ್ಕಾಚಾರದಲ್ಲಿ 29.912 ನೀರು ಸಂಗ್ರಹವಿದ್ದು, ಇದರಲ್ಲಿ 13.832 ಟಿಎಂಸಿ ನೀರು ಬಳಕೆ ಮಾಡಲು ಸಾಧ್ಯವಿಲ್ಲವಾಗಿದೆ. 16.08 ಟಿಎಂಸಿ ಮಾತ್ರ ಬಳಕೆಗೆ ಲಭ್ಯವಾಗಲಿದೆ. ಅಂದರೆ ಡ್ಯಾಂನ 116 ಅಡಿಯವರೆಗೆ ಮಾತ್ರ ಕಾಲುವೆ ಹಾಗೂ ನದಿಗೆ ನೀರು ಹರಿಸ ಬಹುದಾಗಿದೆ. ಉಪಯೋಗಕ್ಕೆ ಲಭ್ಯವಿರುವ 16.08 ಟಿಎಂಸಿ ನೀರಿನಲ್ಲಿ 6.8450 ಟಿಎಂಸಿ ನೀರನ್ನು ಕುಡಿಯಲು ಹಾಗೂ ಕೈಗಾರಿಕಾ ಉದ್ದೇಶಕ್ಕೆ ಮೀಸಲಿಡಲಾಗಿದೆ. ಇದರಲ್ಲಿ ಕುಡಿಯುವ ಉದ್ದೇಶಕ್ಕಾಗಿ ನಾಲೆಯ ಮೂಲಕ 2.582 ಟಿಎಂಸಿ ಹಾಗೂ ನದಿಯ ಮೂಲಕ 3.1840 ಟಿಎಂಸಿ ಮತ್ತು ಉಳಿದ 1.6028 ಟಿಎಂಸಿ ನೀರನ್ನು ಕೈಗಾರಿಕೆಗಳಿಗೆ ನಾಲೆಗಳ ಮೂಲಕ ಹರಿಸಲಾಗುತ್ತದೆ. ಭತ್ತ ಬೆಳೆಯದಂತೆ ರೈತರಿಗೆ ಮನವಿ
ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹದ ತೀವ್ರ ಕೊರತೆಯಿದೆ. ಪ್ರಸ್ತುತ ಮುಂದಿನ ಐದು ತಿಂಗಳ ಅವಧಿಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳಿಗೆ ಹಂತಹಂತವಾಗಿ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ.

ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯದಂತೆ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹಾಗೆಯೇ ಮನವಿ ಪತ್ರ ಸಿದ್ಧಪಡಿಸಿ ರೈತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ನಡೆಸಲಾಗುತ್ತಿದೆ ಎಂದು ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ (ಕಾಡಾ) ಅಧ್ಯಕ್ಷ ಎಚ್.ಎಸ್.ಸುಂದರೇಶ್‌ರವರು ತಿಳಿಸಿದ್ದಾರೆ.
ಮುಂದಿನ 5 ತಿಂಗಳ ಅವಧಿಯಲ್ಲಿ ನೀರು ಹರಿಸುವ ಹಾಗೂ ಸ್ಥಗಿತಗೊಳಿಸುವ ದಿನಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜಲಾಶಯದ ಬಲದಂಡೆಗೆ ನಾಲ್ಕು ಹಂತಗಳಲ್ಲಿ 40 ದಿವಸಗಳ ಕಾಲ ಹಾಗೂ ಎಡ ದಂಡೆಯ ನಾಲೆಗೆ 3 ಹಂತಗಳಲ್ಲಿ 45 ದಿವಸಗಳ ಕಾಲ ನೀರು ಹರಿಸಲಾಗುತ್ತಿದೆ. ಬಲದಂಡೆಗೆ 84 ಹಾಗೂ ಎಡ ದಂಡೆಗೆ 55 ದಿನಗಳ ಕಾಲ ನೀರು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಡ್ಯಾಂನಲ್ಲಿ ಒಟ್ಟಾರೆ 29.912 ಟಿಎಂಸಿ ನೀರು ಸಂಗ್ರಹ ವಿದ್ದು, ಇದರಲ್ಲಿ 13.832 ಟಿಎಂಸಿ ನೀರು ಬಳಕೆ ಮಾಡಲು ಸಾಧ್ಯವಿಲ್ಲವಾಗಿದೆ.

ಉಳಿದ 16.08 ಟಿಎಂಸಿ ವಾತ್ರ ಬಳಕೆಗೆ ಲಭ್ಯವಾಗಲಿದೆ. ಅಂದರೆ ಡ್ಯಾಂನ 116 ಅಡಿಯವರೆಗೆ ಮಾತ್ರ ಕಾಲುವೆ ಹಾಗೂ ನದಿಗೆ ನೀರು ಹರಿಸಬಹುದಾಗಿದೆ. ಇದರಲ್ಲಿ 6.8450 ಟಿಎಂಸಿ ನೀರನ್ನು ಕುಡಿಯಲು ಮತ್ತು ಕೈಗಾರಿಕಾ ಉದ್ದೇಶಕ್ಕೆ ಮೀಸಲಿಡಲಾಗಿದೆ. ನೀರಾವರಿ ಉದ್ದೇಶಕ್ಕೆ 9.235 ಟಿಎಂಸಿ ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಚ್ಚುಕಟ್ಟು ವ್ಯಾಪ್ತಿಯ ಜಿಲ್ಲೆಗಳಲ್ಲಿರುವ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಕಾಡಾದ ವತಿಯಿಂದ ಪತ್ರ ಬರೆದು ಮನವಿ ಮಾಡಲಾಗಿದೆ. ಕೆರೆಗಳ ಪುನರುಜ್ಜೀವನಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದ್ದು, ಮುಖ್ಯಮಂತ್ರಿಗಳಿಗೂ ಸವಿವರವಾದ ಮಾಹಿತಿ ಸಲ್ಲಿಸಲಾಗಿದೆ. ಇದಕ್ಕೆ ಸಿಎಂ ಅನುಮತಿ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಬಲದಂಡೆಗೆ ನಾಲ್ಕು ಹಂತಗಳಲ್ಲಿ ನೀರು ಬಿಡುಗಡೆ
ಮೊದಲ ಹಂತ
ಜ.7ರಿಂದ 18ರವರೆಗೆ 12 ದಿನಗಳ ಕಾಲ ನೀರು ಬಿಡುಗಡೆ. ಜ.19ರಿಂದ ಫೆ.17 ರವರೆಗೆ 30 ದಿನಗಳ ಕಾಲ ನೀರು ಹರಿಯುವಿಕೆ ಸ್ಥಗಿತ.

ಎರಡನೇ ಹಂತ
ಫೆ.18ರಿಂದ 27ರವರೆಗೆ 10 ದಿನಗಳ ಕಾಲ ನೀರು ಬಿಡುಗಡೆ.
ಫೆ. 28 ರಿಂದ ಮಾ.28 ರವರೆಗೆ ನೀರು ಹರಿಯುವಿಕೆ ಸ್ಥಗಿತ.


ಮೂರನೇ ಹಂತ
 ಮಾ.29ರಿಂದ ಎ.7ರವರೆಗೆ 10 ದಿವಸಗಳ ಕಾಲ ನೀರು ಬಿಡುಗಡೆ.
ಎ.8ರಿಂದ ಮೇ.3 ರವರೆಗಿನ 25 ದಿವಸಗಳ ನೀರು ಹರಿಯುವಿಕೆ ಸ್ಥಗಿತ.

ನಾಲ್ಕನೇ ಹಂತ
ಮೇ.4ರಿಂದ ಮೇ.11ರವರೆಗೆ 8 ದಿನಗಳ ಕಾಲ ನೀರು ಬಿಡುಗಡೆ.
ಬಲದಂಡೆಗೆ ಐದು ತಿಂಗಳಲ್ಲಿ 40 ದಿನಗಳ ಕಾಲ ನೀರು ಲಭ್ಯವಾಗಲಿದೆ. 84 ದಿನಗಳು ನೀರು ಸ್ಥಗಿತಗೊಳಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News