ಸುಂಟಿಕೊಪ್ಪ: ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧನ
ಸುಂಟಿ ಕೊಪ್ಪ,ಡಿ.30: ಗ್ರಾಮಲೆಕ್ಕಾಧಿ ಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ನಾಡ ಕಚೇರಿಯಲ್ಲಿ ಚೆಟ್ಟಳ್ಳಿ ಮತ್ತು 7ನೆ ಹೊಸಕೋಟೆ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಚಂದ್ರಪ್ರಸಾದ್ ಎಂಬ ಅಧಿಕಾರಿಯೇ ಲಂಚದ ಆಸೆಗೆ ಬಲಿಯಾಗಿ ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಸೇರಿದ್ದಾರೆ.
ಚೆಟ್ಟಳ್ಳಿಯ ಚೇರಳ ಶ್ರೀಮಂಗಲ ಗ್ರಾಮದ ಕಾಫಿ ಬೋರ್ಡ್ ನಿವಾಸಿಯಾಗಿರುವ ಪೇರಿಯನ ಉದಯ ಎಂಬವವರಿಂದ ರೂ. 7 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರು ಬಲೆ ಬೀಸಿದ್ದಾರೆ.
ಪೇರಿಯನ ಉದಯ ಹಾಗೂ ಅವರ ಸಹೋದರರ ಆಸ್ತಿ ಪಾಲುಪರಿಕತ್ತಿಗೆ ಸಂಬಂಧಿಸಿದಂತೆ ನಮೂನೆ 29 ಮತ್ತು ಪಹಣಿ ಮಾಡಿಸಲು ಡಿ. 8 ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಈ ಕೆಲಸವನ್ನು ಮಾಡಿಕೊಡದೆ ಕಡತವನ್ನು ಬದಿಗಿರಿಸಿ ಕಚೇರಿಗೆ ಅಲೆದಾಡಿಸುತ್ತಾ ರೂ. 10 ಸಾವಿರದ ಲಂಚಕ್ಕೆ ಬೇಡಿಕೆ ಮುಂದಿಟ್ಟಿದ್ದರು ಎನ್ನಲಾಗಿದೆ. 29 ರಂದು ಪೇರಿಯನ ಉದಯರವರು ನಾಡ ಕಚೇರಿಗೆ ಬಂದಾಗ ಇವರಿಬ್ಬರ ನಡುವೆ 3 ಸಾವಿರಕ್ಕೆ ಒಡಂಬಡಿಕೆ ಏರ್ಪಟ್ಟಿತ್ತು ಎನ್ನಲಾಗಿದೆ. ಅದರಂತೆ ಇಂದು ಮಧ್ಯಾಹ್ನ 12:45ರ ಸಮಯದಲ್ಲಿ ಪೇರಿಯನ ಉದಯರವರಿಂದ ರೂ. 3 ಸಾವಿರದ ಬದಲಾಗಿ ಪೂರ್ವನಿಯೋಜಿತ ಸಂಚಿನಂತೆ ರೂ. 7 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಭ್ರಷ್ಟಾಾರ ನಿಗ್ರಹ ದಳದ ಡಿವೈಎಸ್ಪಿ ಮತ್ತು ಸಿಬ್ಬಂದಿ ಮಿಂಚಿನ ದಾಳಿ ನಡೆಸಿ ಲಂಚದ ಹಣದ ಸಮೇತ ಆರೋಪಿ ಗ್ರಾಮ ಲೆಕ್ಕಿಗ ಚಂದ್ರಶೇಖರ್ ಅವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿರುವ ಗ್ರಾಮಲೆಕ್ಕಿಗ ಚಂದ್ರಪ್ರಸಾದ್ ಅವರು ಕಳೆದ ಮೂರು ತಿಂಗಳಿನಿಂದ ಸುಂಟಿಕೊಪ್ಪ ನಾಡ ಕಚೇರಿಯಲ್ಲಿ ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದರು.
ನಾಡ ಕಚೇರಿ ಒಳಗೆ ಸ್ಥಳದ ಅಭಾವವಿದ್ದುದರಿಂದ ಪ್ರವಾಸಿ ಮಂದಿರದ ಪ್ರತ್ಯೇಕವಾದ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಕಚೇರಿಯ ಕೊಠಡಿ ನಾಡ ಕಚೇರಿಯಿಂದ ಪ್ರತ್ಯೇಕವಾಗಿದ್ದು, ಜನರ ಸುಳಿದಾಟ ಕಡಿಮೆಯಿದ್ದುದರಿಂದ ಕ್ಷಣಮಾತ್ರದಲ್ಲಿ ಭ್ರಷ್ಟಾಚಾರ ನಿಗ್ರಹ ದಳದವರು ದಾಳಿ ಮಾಡಿದ ವಿಷಯ ಹೊರಬರಲು ಕೊಂಚ ತಡವಾಗಿತ್ತು.