‘ಕಪ್ಪತಗುಡ್ಡ’ ಉಳಿಸಬೇಕಾಗಿದೆ

Update: 2016-12-30 18:34 GMT

ಮಾನ್ಯರೆ,
ನಮ್ಮ ರಾಜ್ಯದ ಅರಣ್ಯ, ಪರಿಸರ ಮತ್ತು ಜೀವವಿಜ್ಞಾನ ಇಲಾಖೆ ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ನೀಡಲಾಗಿದ್ದ ‘ಸಂರಕ್ಷಿತ ಪ್ರದೇಶ’ ಸ್ಥಾನವನ್ನು ಹಿಂಪಡೆದಿರುವುದು ಮೂರ್ಖತನದ ನಿರ್ಧಾರ.
‘ಉತ್ತರ ಕರ್ನಾಟಕದ ಸಹ್ಯಾದ್ರಿ’ ಎಂದೇ ಪ್ರಖ್ಯಾತವಾಗಿರುವ ಕಪ್ಪತಗುಡ್ಡ ಖನಿಜ, ನೈಸರ್ಗಿಕ ಸಂಪತ್ತುಗಳನ್ನ ಹೊಂದಿದೆ. ಇದಕ್ಕೆ ‘ಸಂರಕ್ಷಿತ ಪ್ರದೇಶ’ ಸ್ಥಾನ ನೀಡಿ ಕೇವಲ ಒಂದು ವರ್ಷ ಆಗಿದ್ದಷ್ಟೇ. ಹಾಗಾದರೆ ಈ ಸ್ಥಾನ ನೀಡುವ ಮುಂಚೆ ಇಲಾಖಾಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡಿರಲಿಲ್ಲವೇ..? ಆಗ ಈ ಪ್ರದೇಶ ರಾಷ್ಟ್ರೀಯ ಉದ್ಯಾನಗಳ ಪಕ್ಕದಲ್ಲಿ ಇಲ್ಲ ಎಂಬುದು ಗೊತ್ತಿರಲಿಲ್ಲವೇ..? ಔಷಧೀಯ ವನ ಹಾಗೂ ಜೀವ ವೈವಿಧ್ಯತೆವನ್ನು ಸಂರಕ್ಷಣೆ ಮಾಡಬೇಕಾದ ಈ ಇಲಾಖೆ ಮಾಡಬಾರದ ತಪ್ಪನ್ನು ಮಾಡಿದೆ. ಈ ಸ್ಥಾನವನ್ನು ಹಿಂಪಡೆದಿರುವ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ.
ಕಪ್ಪತಗುಡ್ಡದಲ್ಲಿ ಚಿನ್ನದ ನಿಕ್ಷೇಪ ಹಾಗೂ ಕಬ್ಬಿಣದ ಅದಿರು ಇದೆ. ಇದರ ಮೇಲೆ ಗಣಿಧನಿಗಳ ಕಣ್ಣು ಬಿದ್ದಿದೆ. ಹೀಗಾಗಿ ಇವರ ಒತ್ತಡದಿಂದಲೇ ಇಲಾಖೆ, ತಾನು ಮಾಡಿದ ಘೋಷಣೆಯನ್ನ ಹಿಂಪಡೆದಿದೆ. ಈ ಮೂಲಕ ಪರಿಸರವಾದಿಗಳ ಹೋರಾಟಕ್ಕೆ ಅನ್ಯಾಯ ಮಾಡಿದೆ. ನಮ್ಮ ರಾಜ್ಯದಲ್ಲಿ ಒಂದಿಷ್ಟು ‘ಹಸಿರು’ ಉಳಿದಿರುವುದು ಕಪ್ಪತಗುಡ್ಡದಂತಹ ಜೀವ ವೈವಿಧ್ಯ ಇರುವ ತಾಣಗಳಲ್ಲಿ.
ಹಾಗಾಗಿ ಇಲಾಖೆ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕಾಗಿದೆ. ಇಲ್ಲದಿದ್ದರೆ ಕಪ್ಪತಗುಡ್ಡವನ್ನು ಉಳಿಸಲು ಹೋರಾಟ ಅಗತ್ಯ.

Writer - -ಶಂಶೀರ್ ಬುಡೋಳಿ, ಬೆಂಗಳೂರು

contributor

Editor - -ಶಂಶೀರ್ ಬುಡೋಳಿ, ಬೆಂಗಳೂರು

contributor

Similar News