×
Ad

ಹಜ್‌ಯಾತ್ರೆ-2017 : ಅರ್ಜಿಗಳ ವಿತರಣೆ ಆರಂಭ: ರೋಷನ್‌ಬೇಗ್

Update: 2017-01-02 20:38 IST

ಬೆಂಗಳೂರು, ಜ.2: ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆಗೆ ಅರ್ಜಿಗಳನ್ನು ಜ.2ರಿಂದ ವಿತರಿಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಹಜ್ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ.

ಸೋಮವಾರ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ರಾಜ್ಯ ಹಜ್ ಸಮಿತಿ ಕಚೇರಿಯಲ್ಲಿ ಸಾಂಕೇತಿಕವಾಗಿ ಹಜ್‌ಯಾತ್ರೆಯ ಅರ್ಜಿಗಳನ್ನು ವಿತರಿಸಿ ಮಾತನಾಡಿದ ಅವರು, ಅರ್ಜಿಗಳನ್ನು ಹಜ್ ಸಮಿತಿಯ ವೆಬ್‌ಸೈಟ್ www.hajcommittee.gov.in ನಿಂದ ಹಾಗೂ ಹೊಸ ಹಜ್ ಆ್ಯಪ್‌ನಿಂದಲೂ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಯಾತ್ರೆಗೆ ತೆರಳ ಬಯಸುವ ಯಾತ್ರಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಜ.24 ರೊಳಗೆ ರಾಜ್ಯ ಹಜ್ ಸಮಿತಿಯ ಕಚೇರಿಗೆ ತಲುಪಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಅರ್ಜಿಯನ್ನು ಕಳೆದ ಬಾರಿಗಿಂತ ಹೆಚ್ಚು ಸರಳೀಕರಣಗೊಳಿಸಲಾಗಿದೆ ಎಂದ ಅವರು, ಪ್ರಸಕ್ತ ಸಾಲಿನ ಹಜ್‌ಕ್ಯಾಂಪ್‌ನ್ನು ನೂತನ ಹಜ್‌ಘರ್‌ನಲ್ಲೆ ಆಯೋಜಿಸಲಾಗುವುದೆಂದು ನುಡಿದರು.

ರಾಜ್ಯ ಹಜ್ ಸಮಿತಿ ಹಜ್‌ಯಾತ್ರೆ ಸಂದರ್ಭದಲ್ಲಿ ಕೇವಲ ಒಂದು ತಿಂಗಳು ಮಾತ್ರ ಕ್ರಿಯಾಶೀಲವಾಗಿರುತ್ತದೆ. ವರ್ಷಪೂರ್ತಿ ಹಜ್‌ಸಮಿತಿಯನ್ನು ಕ್ರಿಯಾಶೀಲ ವಾಗಿರಿಸಿಕೊಳ್ಳಲು ಪವಿತ್ರ ಉಮ್ರಾ ಯಾತ್ರೆಗೂ ಅವಕಾಶ ಮಾಡಿಕೊಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ರೋಷನ್‌ಬೇಗ್ ಹೇಳಿದರು.

ಈ ಹಿಂದೆ, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಕೋಟಾ ಅಡಿ ಪವಿತ್ರ ಹಜ್ ಯಾತ್ರೆ ಸಂಬಂಧ, ತಲಾ ಇಬ್ಬರಂತೆ ಅವಕಾಶ ನೀಡಲಾಗುತಿತ್ತು. ಆದರೆ, ಅದನ್ನು ಇತ್ತೀಚಿಗೆ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ಹಜ್ ಯಾತ್ರೆಗೆ ಕಳುಹಿಸುವ ಅಭ್ಯರ್ಥಿಗಳನ್ನು ನಿಯಮದಡಿ ಆಯ್ಕೆ ಮಾಡಲಾಗುವುದು. ಇದರಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ರೋಷನ್ ಬೇಗ್ ಹೇಳಿದರು.

ಅರ್ಜಿ ವಿತರಣೆ ವೇಳೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮುಹಮ್ಮದ್ ಮೊಹಸಿನ್, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್‌ಖಾನ್, ವೌಲಾನ ಮುಹಮ್ಮದ್ ಲುತ್ಫುಲ್ಲಾ ರಶಾದಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News