ಕಾಡಾನೆ ಹಾವಳಿ ಶಾಶ್ವತ ತಡೆಗೆ ನಿಯೋಗ
ಸಿದ್ದಾಪುರ,ಜ.2: ಜಿಲ್ಲೆಯ ಕಾಫಿತೋಟಗಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಶಾಶ್ವತವಾಗಿ ತಡೆಗಟ್ಟಲು ಸದ್ಯದಲ್ಲೇ ಎಲ್ಲಾ ಪಕ್ಷದ ಮುಖಂಡರುಗಳೊಂದಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ನಿಯೋಗ ತೆರಳಿ ಸಮಸ್ಯೆ ಬಗೆಹರಿಸಲು ಮುಂದಾಗುವುದಾಗಿ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ ಪ್ರದೀಪ್ ತಿಳಿಸಿದ್ದಾರೆ.
ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಮಾಲ್ದಾರೆ ಸಮೀಪದ ಮೈಲಾತ್‌ಪುರದ ನಿವಾಸಿ ಕಾರ್ಮಿಕ ಚೆಲುವನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಸಂಕಷ್ಟ ಪಡುತ್ತಿದ್ದಾರೆ.
ರಾಜ್ಯ ಹಾಗೂ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಕಾಡಾನೆ ಹಾವಳಿ ಶಾಶ್ವತ ತಡೆಗೆ ಸರ್ವ ಪಕ್ಷಗಳ ನಿಯೋಗ ತೆರಳಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿಗೆ ಬಿದಿರು ಸೇರಿದಂತೆ ನೀರಿನ ಸೌಕರ್ಯ ಇಲ್ಲದಿರುವುದರಿಂದ ಜಿಲ್ಲಾದ್ಯಂತ ಕಾಡಾನೆಗಳು ಆಹಾರವನ್ನು ಅರಸಿ ತೋಟಗಳಲ್ಲಿ ಬೀಡುಬಿಟ್ಟಿವೆ. ಇದರಿಂದ ಆನೇಕ ಅಮೂಲ್ಯ ಜೀವಗಳು ಬಲಿಯಾಗುತ್ತಿದೆ. ಕೇಂದ್ರ ಸರಕಾರ ಇನ್ನಷ್ಟು ಆನೆಗಳನ್ನು ಹಿಡಿಯಲು ಅನುಮತಿ ನೀಡಬೇಕು ಹಾಗೂ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಅರಣ್ಯಕ್ಕೆ ಬಿಡಬೇಕೆಂದು ಸರಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ ಅವರು, ಇದಕ್ಕೆ ರಾಜಕೀಯ ರಹಿತವಾಗಿ ಎಲ್ಲರೂ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಚಿನ್ನಮ್ಮ, ವಲಯ ಕಾಂಗ್ರೆಸ್ ಅಧ್ಯಕ್ಷ ಸಜೀ ತೋಮಸ್, ಮಾಜಿ ಗ್ರಾ ಪಂ ಉಪಾಧ್ಯಕ್ಷ ನಿಸಾರ್ ಅಹ್ಮದ್, ನೆಲ್ಯಹುದಿಕೇರಿ ಗ್ರಾಪಂ ಸದಸ್ಯ ಎ.ಕೆ ಹಕೀಂ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.