ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ಅಸಭ್ಯ ವರ್ತನೆ: ಆರೋಪ
ದಾವಣಗೆರೆ, ಜ. 3: ಹರಪನಹಳ್ಳಿ ತಾಲೂಕಿನ ಹಲವಾಗಲು ಮೊರಾರ್ಜಿ ವಸತಿ ಶಾಲೆಯ ಇಬ್ಬರು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದನ್ನು ಖಂಡಿಸಿರುವ ಎನ್‌ಎಸ್‌ಯುಐ, ತಕ್ಷಣ ಆ ಶಿಕ್ಷಕರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದಭರ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮುಜಾಹಿದ್ ಪಾಷ ಮಾತನಾಡಿ, ಮೊರಾರ್ಜಿ ಶಾಲೆಯ ಶಿಕ್ಷಕರಾದ ರಾಘವೇಂದ್ರ ಹಾಗೂ ಗಂಗಾಧರ್ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಈಗಾಗಲೇ ಹಲವಾಗಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ, ಆರೋಪಿ ಶಿಕ್ಷಕರು ತಲೆಮರೆಸಿಕೊಂಡಿದ್ದಾರೆ. ಕೂಡಲೇ ಆರೋಪಿಗಳನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಿ ವಿಚಾರಣೆ ನಡೆಸಬೇಕು. ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಶಾಲೆಯಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು. ಎಲ್ಲಾ ವಸತಿ ಶಾಲೆಗಳಲ್ಲಿ ಸಿಸಿ ಟಿ.ವಿ. ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.