ವ್ಯಕ್ತಿತ್ವ ನಿರ್ಮಾಣ ಬೋಧನೆಯಿಂದಷ್ಟೇ ಆಗುವುದಿಲ್ಲ: ಮಾತಾಜೀ ವಿವೇಕಮಯಿ
ಚಿಕ್ಕಮಗಳೂರು, ಜ.4: ವ್ಯಕ್ತಿತ್ವ ನಿರ್ಮಾಣ ಬೋಧನೆಯಿಂದಷ್ಟೇ ಆಗುವುದಿಲ್ಲ. ಸದಾ ಕೇಳುವ ಮಾತು, ನೋಡುವ ನೋಟ,ಸುತ್ತಲಿನ ಪರಿಸರ ವಾತಾವರಣ ನಮ್ಮ ಮನಸ್ಸನ್ನು ರೂಪಿಸುತ್ತದೆ ಎಂದು ಮಾತಾಜೀ ವಿವೇಕಮಯಿ ಅಭಿಪ್ರಾಯಪಟ್ಟರು.
ಅವರು ಪ್ರೊ.ಎ.ಸಿ.ದೇವೇಗೌಡ ಮತ್ತು ಶಿವಮ್ಮ ಎಜ್ಯುಕೇಷನ್ ಟ್ರಸ್ಟ್, ಸಪ್ತಮಿ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಆಶ್ರಯದಲ್ಲಿ ನಗರದ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಪರಿಪೂರ್ಣ ಶಿಕ್ಷಣಕ್ಕಾಗಿ ಶಿಕ್ಷಕರ ಸಮ್ಮೇಳನ ಗುರುಚಿಂತನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿದ್ದ ಮಾತನಾಡಿದರು.
ಭಾರತೀಯರಲ್ಲಿ ದಾಸ್ಯತ್ವ ಹೆಚ್ಚಿಸಲು ಲಾರ್ಡ್‌ಮೆಕಾಲೆ ರೂಪಿಸಿದ್ದ ಶಿಕ್ಷಣಪದ್ಧತಿಯನ್ನೆ ಇಂದೂ ಅನುಸರಿಸುತ್ತಿದ್ದೇವೆ. ಶಕ್ತಿಶಾಲಿ, ಚಾರಿತ್ರ್ಯಸಂಪನ್ನವಾಗಿ ದೇಶ ಮತ್ತು ಸಮಾಜ ಹಾಗೂ ಪರಿವಾರಕ್ಕೆ ಉಪಯುಕ್ತವಾಗಬೇಕಾದ ವ್ಯಕ್ತಿಗಳ ನಿರ್ಮಾಣ ಶಿಕ್ಷಣದಿಂದ ಆಗುತ್ತಿಲ್ಲ. ಶಿಕ್ಷಣ ಪದ್ಧತಿಯ ಕೊರತೆ ಗಮನಿಸಬಹುದು ಎಂದರು.
ಪದ್ಧತಿ ಬದಲಿಸುವುದು ಅಸಾಧ್ಯವೆಂಬ ಭಾವನೆ ಈಗ ಬದಲಾಗುತ್ತಿದೆ. ಸಂಪೂರ್ಣ ಬದಲಾಯಿಸುವ ದಿನಗಳು ಹತ್ತಿರ ಬರುತ್ತಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ ಅವರು, ಭಾರತೀಯ ಚಿಂತನೆ ತಳಹದಿಯೆ ಧರ್ಮ ಮತ್ತು ಆಧ್ಯಾತ್ಮ. ಇದು ಪ್ರತಿಯೊಂದರಲ್ಲೂ ರಚನಾತ್ಮಕ, ಸಕಾರಾತ್ಮಕ ಮತ್ತು ಜೀವನ ನಿರ್ಮಾಣ ಮಾಡುವುದು. ಒಳಿತೇ ಇದರ ಗುರಿ ಎಂದು ಹೇಳಿದರು.
ಪ್ರೊ.ಎ.ಸಿ.ದೇವೇಗೌಡ ಮತ್ತು ಶಿವಮ್ಮ ಎಜ್ಯುಕೇಷನ್‌ಟ್ರಸ್ಟ್ ಅಧ್ಯಕ್ಷ ಎ.ಎಸ್.ಶಂಕೇಗೌಡ ಸಮ್ಮೇಳನ ಉದ್ಘಾಟಿಸಿದರು.ರೋಟರಿಕ್ಲಬ್ ಅ್ಯಕ್ಷ ಎಂ.ಆರ್.ಸುಧೀರ್ ಅಧ್ಯಕ್ಷತೆವಹಿಸಿದ್ದರು.ಸಪ್ತಮಿಟ್ರಸ್ಟ್ ಅಧ್ಯಕ್ಷ ಬಿ.ಎನ್.ಆನಂದ್ ಪ್ರಾಸ್ತಾವಿಸಿದರು.
ಶಿಕ್ಷಣ ತಜ್ಞರಾದ ಎಂ.ಎನ್.ಷಡಕ್ಷರಿ, ಸುರೇಶ್ ಕುಲಕರ್ಣಿ, ಪದ್ಮಿನಿಮುರುಳಿ, ರೋಟರಿ ಮಾಜಿ ಅಧ್ಯಕ್ಷರುಗಳಾದ ಡಿ.ಎಚ್.ನಟರಾಜ್, ವಿನಯ್ ಮತ್ತು ಶ್ರೀಕಾಂತ, ನಿರ್ದೇಶಕರುಗಳಾದ ಎಸ್.ಬಿ.ಪ್ರಸನ್ನಕುಮಾರ್ ಮತ್ತು ಗೌತಮಚಂದ್‌ಸಿಯಾಲ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿ.ಆರ್.ರಘುರಾಮ್ ವಂದಿಸಿದರು.