ಅಪಘಾತ: ಬೈಕ್ ಸವಾರರಿಗೆ ಗಾಯ
ಮೂಡಿಗೆರೆ, ಜ.4: ಕಾರೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ತೀವ್ರ ಗಾಯಗೊಂಡಿರುವ ಘಟನೆ ಪಟ್ಟಣದ ಮೇಗಳಪೇಟೆ ಎಂಬಲ್ಲಿ ಬುಧವಾರ ನಡೆದಿದೆ.
ಚಿಕ್ಕಮಗಳೂರು ನಗರದ ಕೆ.ಆರ್.ಪೇಟೆ ಬಳಿಯ ಶಾಂತಿಪುರ ನಿವಾಸಿಗಳಾದ ರಾಜು(26) ಮತ್ತು ಸತ್ಯಕುಮಾರ್(28) ಗಂಭೀರ ಗಾಯಗೊಂಡವರು.
ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಎಂಜಿಎಂ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಬಳಿಕ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಗಾಯಾಳುಗಳಿಗೆ ತಲೆ, ಕೈಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಈ ದುರ್ಘಟನೆಗೆ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ173 ರಸ್ತೆಯು ಮೂಡಿಗೆರೆ ಪಟ್ಟಣದೊಳಗೆ ಅತ್ಯಂತ ಕಿರಿದಾಗಿರುವುದು ಮೂಲ ಕಾರಣ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೂಡಿಗೆರೆ ಪಟ್ಟಣದ ರಸ್ತೆಯು ಅತ್ಯಂತ ಕಿರಿದಾಗಿದೆ. ರಸ್ತೆ ಮೇಲೆಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, ಸುಗಮ ರಸ್ತೆ ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ರಸ್ತೆಯಲ್ಲಿ ಸಾಗುವ ವಾಹನಗಳು ಪರಸ್ಪರ ತಾಕುವುದು ಮಾಮೂಲಿನಂತಾಗಿದ್ದರೂ ರಸ್ತೆ ಅಗಲೀಕರಣಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.