ಬೋಪಣ್ಣ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ
ಮಡಿಕೇರಿ, ಜ.4: 2005ರಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯನ್ನು ಬೆಚ್ಚಿ ಬೀಳಿಸಿದ್ದ ಎಂ.ಬಿ. ಬೋಪಣ್ಣ ಬರ್ಬರ ಹತ್ಯೆ ಪ್ರಕರಣದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದ್ದು, ನಗರದ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಭಾರೀ ದಂಡ ಸಹಿತ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಮಹತ್ವದ ತೀರ್ಪು ನೀಡಿದೆ.
ಕಾಲೂರು ಗ್ರಾಮದ ಟಿ.ಎ. ಮಹೇಶ, ಅವರ ಸಹೋದರ ಟಿ.ಎ. ಅರುಣ ಯಾನೆ ತಿಮ್ಮಯ್ಯ, ಪಿ.ಎಂ. ಮಹೇಶ ಹಾಗೂ ಕೆ.ಯು. ದಿನೇಶ ಎಂಬವರು ದಂಡ ಸಹಿತ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.
ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ, ತಲಾ 5 ಸಾವಿರ ರೂ. ದಂಡ, ಸಂಚು ಹೂಡಿ ಕೊಲೆ ಮಾಡಿದ್ದಕ್ಕಾಗಿ ತಲಾ 2 ಸಾವಿರ ರೂ. ದಂಡ, ಕಠಿಣ ಜೀವಾವಧಿ ಶಿಕ್ಷೆ , ಕೊಲೆ ಮಾಡಲು ಪ್ರಚೋದನೆ ನೀಡಿದ ಅಪರಾಧಕ್ಕಾಗಿ ಟಿ.ಎ. ಮಹೇಶ್‌ಗೆ ಜೀವಾವಧಿ ಶಿಕ್ಷೆ, 5 ಸಾವಿರ ರೂ. ದಂಡ, ಬಂದೂಕು ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಟಿ.ಎ. ಅರುಣನಿಗೆ 2 ಮತ್ತು 4 ವರ್ಷಗಳ ಕಠಿಣ ಸಜೆ, 4 ಸಾವಿರ ರೂ. ದಂಡ, ಬಂದೂಕು ಕಾಯ್ದೆ ಅಡಿಯ ಅಪರಾಧಕ್ಕಾಗಿ ಪಿ.ಎಂ. ಮಹೇಶನಿಗೆ 4 ವರ್ಷ ಕಠಿಣ ಸಜೆ ಹಾಗೂ 2 ಸಾವಿರ ರೂ. ದಂಡ ವಿಧಿಸಿದ್ದಾರೆ.
ಪ್ರಕರಣದ ಮತ್ತೋರ್ವ ಆರೋಪಿ ಎಂ.ಎಸ್. ರವಿ ತನ್ನ ತಂದೆಗೆ ಸೇರಿದ ಕೋವಿಯನ್ನು ಕೊಲೆ ಮಾಡಿದ ಆರೋಪಿಗಳಿಗೆ ನೀಡಿದ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದರೂ, ಈತನು ನ್ಯಾಯಾಂಗ ಬಂಧನದಲ್ಲಿದ್ದ ಮೂರು ತಿಂಗಳು 5 ದಿವಸಗಳನ್ನು ಶಿಕ್ಷೆಯೆಂದು ಪರಿಗಣಿಸಿದ್ದು, 2 ಸಾವಿರ ರೂ. ದಂಡ ವಿಧಿಸಿದೆ. ಸರಕಾರದ ಪರ ಸರಕಾರಿ ಅಭಿಯೋಜಕಿ ಎ. ಕೃಷ್ಣವೇಣಿ ವಾದ ಮಂಡಿಸಿದ್ದರು.
ಘಟನೆಯ ವಿವರ: ಮಡಿಕೇರಿ ಚೈನ್‌ಗೇಟ್ ಬಳಿಯ ನಿವಾಸಿ ಎಂ.ಬಿ. ಬೋಪಣ್ಣ ಮತ್ತು ಕಾಲೂರಿನ ಟಿ.ಎ. ಮಹೇಶ ಎಂಬವರ ನಡುವೆ ಹಳೇ ವೈಷಮ್ಯವಿತ್ತು. 2000 ಇಸವಿಯಲ್ಲಿ ಮುತ್ತಾರ್ ಮುಡಿಸೇತುವೆ ಬಳಿ ಬೋಪಣ್ಣನು ತನ್ನ ಸಹಚರರೊಂದಿಗೆ ಸೇರಿಕೊಂಡು ಹರಿತವಾದ ಆಯುಧಗಳಿಂದ ಮಹೇಶನ ಮೇಲೆ ದಾಳಿ ನಡೆಸಿದ್ದ, ಈ ದ್ವೇಷಕ್ಕೆ ತಿರುಗಿ ಬಿದ್ದ ಆರೋಪಿಗಳು ಬೋಪಣ್ಣನ ಮನೆಯ ಸಮೀಪದ ಪೇಟೆಯೊಂದರಲ್ಲಿ ಬೋಪ್ಪಣ್ಣನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದರು.