×
Ad

ತಿಂಗಳಿಗೊಮ್ಮೆ ಸ್ವಚ್ಛತಾ ಆಂದೋಲನ: ಶಾಸಕ ಕಿಮ್ಮನೆ

Update: 2017-01-04 22:57 IST

ತೀರ್ಥಹಳ್ಳಿ, ಜ.4: ಮಲೆನಾಡಿನ ಪ್ರತಿಷ್ಠಿತ ಸೌಹಾರ್ದ ಧಾರ್ಮಿಕ ಕೇಂದ್ರವಾದ ಹಣಗೆರೆ ದೇವಸ್ಥಾನ ಮತ್ತು ದರ್ಗಾ ಆವರಣದಲ್ಲಿ ಪಕ್ಷದ ಕಾರ್ಯಕರ್ತರಿಂದ ತಿಂಗಳಿಗೊಮ್ಮೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ತಾಲೂಕಿನ ಹಣಗೆರೆಕಟ್ಟೆಯ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಗ್ರಾಮಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹಣಗೆರೆ ಕ್ಷೇತ್ರದ ಅಭಿವೃದ್ಧಿಗೆ ಗ್ರಾಮ ವಿಕಾಸ ಯೋಜನೆಯಡಿ 65 ಲಕ್ಷ ರೂ.ನ್ನು ನೀಡಲಾಗಿದೆ. ಜೊತೆಗೆ 25 ಲಕ್ಷ ರೂ. ಅನುದಾನವನ್ನು ಮೂಲಭೂತ ಸೌಕರ್ಯಕ್ಕೆ ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕ್ಷೇತ್ರದ ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯ ಧಾರ್ಮಿಕ ಕೇಂದ್ರವಾದ ಹಣಗೆರೆಕಟ್ಟೆಯನ್ನು ಸ್ವಚ್ಛತಾ ಕೇಂದ್ರವನ್ನಾಗಿ ಮಾಡಲು ಶ್ರೀಕ್ಷೇತ್ರದ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರು ತಮ್ಮ ಗುರಿಯನ್ನು ಇಟ್ಟುಕೊಂಡಿದ್ದರು. ಆ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯಕ್ಕೆ ಈ ಭಾಗದ ಸಾರ್ವಜನಿಕರು ಹಾಗೂ ಭಕ್ತರು ಕೈಜೋಡಿಸಿರುವುದು ಸ್ವಚ್ಛತಾ ಆಂದೋಲನಕ್ಕೆ ನೀಡುತ್ತಿರುವ ಬೆಂಬಲ ಎಂದು ತಿಳಿಸಿದರು.


ಜಿಪಂ ಸದಸ್ಯ ಕೆ.ಬಿ. ಶ್ರೀನಿವಾಸ್ ಮಾತನಾಡಿ, ಇಲ್ಲಿನ ಅಶುಚಿತ್ವದ ಬಗ್ಗೆ ಈಗಾಗಲೇ ಸಭೆಗಳಲ್ಲಿ ಚರ್ಚೆಯಾಗಿದೆ. ಸ್ವಚ್ಛತಾ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಮಾತ್ರ ನಮ್ಮ ಸುತ್ತಲಿನ ಪರಿಸರದ ವ್ಯವಸ್ಥೆ ಶುದ್ಧವಾಗುತ್ತದೆ ಎಂದು ತಿಳಿಸಿದರು.


ಈ ಸಮಾರಂಭದಲ್ಲಿ ತಾಪಂ ಸದಸ್ಯ ಎಸ್.ರಾಮಚಂದ್ರ, ಕವಿರಾಜ್, ಕುಕ್ಕೆ ಪ್ರಶಾಂತ್, ಹಣಗೆರೆ ಗ್ರಾಪಂ ಅಧ್ಯಕ್ಷೆ ಜ್ಯೋತಿ, ತಾಪಂ ಅಧಿಕಾರಿ ಧನರಾಜ್, ಮಾಳೂರು ಸಬ್ ಇನ್‌ಸ್ಪೆಕ್ಟರ್ ಗುರುರಾಜ್, ತೀರ್ಥಹಳ್ಳಿ ಲಯನ್ಸ್ ಮತ್ತು ರೋಟರಿಯ ಪದಾಧಿಕಾರಿಗಳು, ಹಣಗೆರೆ ಪಂಚಾಯತ್ ಸದಸ್ಯರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News